Ad Widget .

ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣ| ಎನ್ಐಎ ದಾಳಿಯಲ್ಲಿ ಮಹತ್ವದ ದಾಖಲೆಗಳು ವಶಕ್ಕೆ

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚಾದ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳದ ತಂಡವು ಮಂಗಳವಾರ(ಸೆ.6) ಬೆಳ್ಳಂಬೆಳಗ್ಗೆ ಸುಳ್ಯ ಹಾಗೂ ಪುತ್ತೂರು ತಾಲೂಕಿನ 32 ಸ್ಥಳಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.

Ad Widget . Ad Widget .

ಪ್ರವೀಣ್‌ ಹತ್ಯೆಯ ಆರೋಪಿಗಳ ವಿಚಾರಣೆಯ ಸಂದರ್ಭದಲ್ಲಿ ತನಿಖಾ ದಳದ ತಂಡಕ್ಕೆ ದೊರೆತ ಸುಳಿವಿನ ಆಧಾರದಲ್ಲಿ ಹತ್ಯೆ ಪ್ರಕರಣಕ್ಕೆ ಸಹಕಾರ, ಆರೋಪಿಗಳ ರಕ್ಷಣೆ ನೆರವಾಗುತ್ತಿರುವವರ ಮಾಹಿತಿ ಕಲೆ ಹಾಕಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

Ad Widget . Ad Widget .

ಪ್ರವೀಣ್‌ ಹತ್ಯೆ ಪ್ರಕರಣದ ಆರೋಪಿಗಳು, ಪಿಎಫ್‌ಐ ಮುಖಂಡರ ನಿವಾಸಕ್ಕೆ ಬೆಳಗ್ಗೆ 5.30 ಹೊತ್ತಿಗೆ ದಾಳಿ ನಡೆಸಲಾಗಿದೆ. 70 ಕ್ಕೂ ಅಧಿಕ ಅಧಿಕಾರಿಗಳ ತಂಡ ಆಯಾ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಹಲವೆಡೆ ಮೊಬೈಲ್‌, ಇತರೆ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಮನೆಯಲ್ಲಿ ಇಲ್ಲದವರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಲಾಗಿದೆ. ಪಿಎಫ್‌ಐ, ಎಸ್‌ಡಿಪಿಐನಲ್ಲಿ ಗುರುತಿಸಿಕೊಂಡಿರುವ ಪ್ರಮುಖರ ಮನೆ, ಕಚೇರಿಗಳಿಗೆ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಪಿಐ ಜಿಲ್ಲಾ ಮುಖಂಡ ಇಕ್ಬಾಲ್‌ ಬೆಳ್ಳಾರೆ, ಜಾಬಿರ್‌ ಅರಿಯಡ್ಕ, ಮನ್ಸೂರ್‌ ಅಗ್ನಾಡಿ ಸೇರಿದಂತೆ ಹಲವರ ನಿವಾಸಕ್ಕೆ ದಾಳಿ ನಡೆಸಲಾಗಿದೆ. ಪ್ರವೀಣ್‌ ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿಗಳಾದ ಶಿಯಾಬ್‌, ಬಶೀರ್‌, ರಿಯಾಝ್ ಅಂಕತಡ್ಕ, ಶಫೀಕ್‌ ಬೆಳ್ಳಾರೆ, ಜಾಕೀರ್‌ ಸವಣೂರು, ಸದ್ದಾಂ ಪಳ್ಳಿಮಜಲು, ಹಾರೀಸ್‌ ಪಳ್ಳಿಮಜಲು, ಅಬಿದ್‌ ನಾವೂರು, ನೌಫಲ್‌, ಅಬ್ದುಲ್‌ ಕಬೀರ್‌ ಜಟ್ಟಿಪಳ್ಳನ ನಿವಾಸಕ್ಕೆ ದಾಳಿ ನಡೆಸಿ ಮನೆ ಮಂದಿ, ಸುತ್ತಮುತ್ತಲಿನ ಪರಿಸರದಲ್ಲಿ ವಿಚಾರಣೆ ನಡೆಸಿ ಸ್ಥಳ ಮಹಜರು ಮಾಡಲಾಗಿದೆ. ಅನೇಕ ದಾಖಲೆ ಪತ್ರ, ಮೊಬೈಲ್‌ ಪೋನ್‌ ವಶಕ್ಕೆ ಪಡೆಯಲಾಗಿದೆ.

ಪುತ್ತೂರು ಸಮೀಪದ ಮಿತ್ತೂರು ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ಪಿಎಫ್‌ಐನ ಸಭೆ ಸಮಾರಂಭ ನಡೆಯುವ ಕೇಂದ್ರ ಸ್ಥಾನ ಎನ್ನುವ ಸುಳಿವು ದೊರೆತ ಹಿನ್ನೆಲೆಯಲ್ಲಿ ಎನ್‌ಐಎ ತಂಡವು ಸಭಾಂಗಣದ ಕಚೇರಿಗೆ ದಾಳಿ ನಡೆಸಿ ಸಿಸಿ ಕ್ಯಾಮರಾ ದೃಶ್ಯಾವಳಿ ಸಹಿತ ದಾಖಲೆ ಪತ್ರಗಳನ್ನು ಪರಿಶೀಲಿಸಿದೆ. ಪಿಎಫ್‌ಐ, ಎಸ್‌ಡಿಪಿಐ ಸಭೆ ನಡೆಸಿ ಸಮಾಜ ಘಾತುಕ ಕೃತ್ಯ ನಡೆಸಲು ಯೋಜನೆ ರೂಪಿಸುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಎನ್‌ಐಎ ದಾಳಿ ಮಹತ್ವ ಪಡೆದಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಘಟನೆಗೆ ಸಂಬಂಧಿಸಿ ಹಂತಕರು ಸುಳ್ಯದವರಾಗಿದ್ದು ಆರೋಪಿಗಳ ವಾಸ ಸ್ಥಳಕ್ಕೆ ದಾಳಿ ನಡೆಸಲಾಗಿದೆ. ಪ್ರಮುಖ ಆರೋಪಿ ಶಿಯಾಬ್‌ ವಾಸವಾಗಿದ್ದ ಸುಳ್ಯ ನಾವೂರಿನ ಮನೆ ಮತ್ತು ಸುತ್ತಮುತ್ತ ತಪಾಸಣೆ ನಡೆಸಲಾಗಿದೆ.

ಪ್ರವೀಣ್‌ ನೆಟ್ಟಾರು ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತ್ತು. ಪ್ರಕರಣ ಸಂಬಂಧ ಎನ್‌ಐಎ, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿ ಪ್ರಕರಣ ದಾಖಲಿಸಿ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಾಥಮಿಕ ತನಿಖಾ ವರದಿ(ಎಫ್‌ಐಆರ್‌)ಸಲ್ಲಿಸಿತ್ತು. ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ವಿಪುಲ್‌ ಅಲೋಕ್‌ ಅವರು ಎನ್‌ಐಎ ಮಹಾ ನಿರ್ದೇಶಕರಿಗೆ ಆ.6 ರಂದು ಆದೇಶ ನೀಡಿದ್ದರು. ಕರ್ನಾಟಕ ಸರಕಾರದ ಮುಖ್ಯಕಾರ್ಯದರ್ಶಿ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೂ ಈ ಕುರಿತು ಮಾಹಿತಿ ನೀಡಲಾಗಿತ್ತು. ಪ್ರಕರಣದ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿರುವ ಬೆನ್ನಲ್ಲೇ ಎನ್‌ಐಎ ಅಧಿಕಾರಿಗಳು ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆ 302(ಕೊಲೆ) ಮತ್ತು 120(ಬಿ)(ಕೊಲೆಗೆ ಸಂಚು) ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಅಡಿಯಲ್ಲಿ ಪ್ರಕರಣ ದಾಖಲಿಸಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿ ವಿವಿಧ ಪ್ರಕ್ರಿಯೆ ಪೂರ್ಣಗೊಳಿಸಿ ತನಿಖೆ ಕೈಗೆತ್ತಿಕೊಂಡಿತ್ತು.

Leave a Comment

Your email address will not be published. Required fields are marked *