ಸಮಗ್ರ ನ್ಯೂಸ್: ಉದ್ಯಮ ಕ್ಷೇತ್ರದ ದೈತ್ಯ ರಿಲಯನ್ಸ್ ಕಂಪನಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ತಂಪು ಪಾನಿಯ ಸಂಸ್ಥೆಯ ಮೇಲೆ ಕಣ್ಣು ಹಾಕಿದೆ. ಪುತ್ತೂರಿನ ಸಣ್ಣ ಗ್ರಾಮದಲ್ಲಿ ಆರಂಭವಾದ ಸಣ್ಣ ಉದ್ಯಮ, ಏಷ್ಯಾದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯ ರಿಲಯನ್ಸ್ ಕಣ್ಣಿಗೆ ಬಿದ್ದಿದ್ದು,ಬಹುಕೋಟಿ ಆಫರ್ ಕೂಡಾ ಮಾಡಿದೆ.
ಆದರೆ ಪುತ್ತೂರಿನ ಕಂಪನಿ ಮಾತ್ರ ಅಂಬಾನಿಯ ಆಫರ್ ಆನ್ನು ನಯವಾಗಿ ತಿರಸ್ಕರಿಸಿದ್ದು, ಕಂಪನಿ ಬೆಳೆಸುವ ಉದ್ದೇಶ ವ್ಯಕ್ತಪಡಿಸಿದೆ. ಮಾರಾಟ ಮಾಡುವ ಉದ್ದೇಶ ಖಂಡಿತಾ ಇಲ್ಲವೆಂದು ನೇರವಾಗಿ ಸ್ಪಷ್ಟಪಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮೂಲದ ‘ಬಿಂದು’ ಬ್ರ್ಯಾಂಡ್ ಖ್ಯಾತಿಯ ಎಸ್ ಜಿ ಕಂಪನಿಯ ಮೆಗಾ ಫ್ರೂಟ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮೇಲೆ ಸದ್ಯ ರಿಲಯನ್ಸ್ ಕಣ್ಣು ಬಿದ್ದಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿದ ಎಸ್ ಜಿ ಕಾರ್ಪೋರೇಟ್ಸ್ ಆಡಳಿತ ನಿರ್ದೇಶಕ ಸತ್ಯ ಶಂಕರ್, ಈ ಹಿಂದೆಯೂ ವಿಪ್ರೋ, ಕೋಕೋ ಕೋಲಾ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕಂಪನಿಗಳು ನಮ್ಮ ಕಂಪನಿ ಖರೀದಿಗೆ ಆಸಕ್ತಿ ತೋರಿಸಿದ್ದವು. ಈಗ ರಿಲಯನ್ಸ್ ಕಂಪೆನಿ ಕೂಡಾ ದೊಡ್ಡ ಆಫರ್ ನೀಡಿದೆ. ಉದ್ಯಮ ವಲಯದಲ್ಲಿ ಇದೆಲ್ಲಾ ಸಾಮಾನ್ಯ ವಿಷಯ. ಆದರೆ ನಾವು ಯಾವುದೇ ಕಾರಣಕ್ಕೂ ಕಂಪೆನಿಯನ್ನು ಮಾರಾಟ ಮಾಡಲ್ಲ ಎಂದಿದ್ದಾರೆ.
ಪ್ರಾರಂಭದಲ್ಲಿ ಆಟೋ ಚಾಲಕರಾಗಿದ್ದ ಸತ್ಯಶಂಕರ್ ಭಟ್ ಬಳಿಕ ಪುತ್ತೂರಿನ ಕುಗ್ರಾಮದಲ್ಲಿ ಸ್ವಂತ ಉದ್ದಿಮೆ ಆರಂಭಿಸಿದರು. ‘ಬಿಂದು’ ಕುಡಿಯುವ ನೀರು ಘಟಕ ಆರಂಭಿಸಿ ಯಶಸ್ವಿ ಯಾಗಿದ್ದಾರೆ. ಕುಗ್ರಾಮದಲ್ಲಿ ಬೆರಳೆಣಿಕೆಯ ಕಾರ್ಮಿಕರಿಂದ ಆರಂಭವಾದ ಬಿಂದು ಉದ್ಯಮ, ಇಂದು 500 ಕೋಟಿ ರೂಪಾಯಿ ವಾರ್ಷಿಕ ವ್ಯವಹಾರ ಮಾಡುತ್ತಿದೆ. 2025ರ ವೇಳೆಗೆ ಒಂದು ಸಾವಿರ ಕೋಟಿ ರೂಪಾಯಿ ವಾರ್ಷಿಕ ವ್ಯವಹಾರ ಮಾಡುವ ಗುರಿಯನ್ನು ಹೊಂದಿದೆ.
ದಕ್ಷಿಣ ಭಾರತದಾದ್ಯಂತ ಮಾರುಕಟ್ಟೆ ಹೊಂದಿರುವ ಬಿಂದು ಗ್ರೂಪ್ ಅಮೇರಿಕಾ, ಗಲ್ಫ್ ರಾಷ್ಟ್ರ ಸೇರಿದಂತೆ ವಿದೇಶಿ ಮಾರುಕಟ್ಟೆಯನ್ನೂ ಹೊಂದಿದೆ. ಉತ್ತರ ಭಾರತ ಮತ್ತು ಮಧ್ಯ ಭಾರತಕ್ಕೂ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ಹೊಸದಾಗಿ ಹೈದರಾಬಾದ್ ನಲ್ಲೂ ಬಿಂದು ಗ್ರೂಪ್ ಬೃಹತ್ ಘಟಕ ಆರಂಭಿಸಿದೆ.
ಎಸ್ ಜಿ ಕಂಪೆನಿ, ಬಿಂದು ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್, ಬಿಂದು ಜೀರಾ ಫಿಜ್, ಬಿಂದು ಲೆಮನ್, ಸಿಪ್ ಆನ್ ಬ್ರ್ಯಾಂಡ್ ನಲ್ಲಿ ಮ್ಯಾಂಗೋ, ಮ್ಯಾಂಗೋ ಮಿಲ್ಕ್ ಶೇಕ್, ಲೆಮನ್ ವಿತ್ ಮಿಂಟ್, ಆ್ಯಪಲ್, ಪೇರಳೆ, ಲಿಚ್ಚಿ, ದಾಳಿಂಬೆ, ಪುನರ್ಪುಳಿ, ಸ್ಟ್ರಾಬರಿ, ಫ್ರೋಜನ್ ಬ್ರ್ಯಾಂಡ್ ನಲ್ಲಿ ಗ್ರೀನ್ ಅ್ಯಪಲ್, ಆರೆಂಜ್, ಆಯಪಲ್, ಶುಂಠಿ, ಸ್ಟ್ರಾಬರಿ, ಝಿವೋ ಬ್ರ್ಯಾಂಡ್ ನಲ್ಲಿ ಸೋಡಾ, ಕೋಲಾ ಹಾಗೂ ಸ್ನ್ಯಾಕ್ ಆಪ್ ನಲ್ಲಿ 15 ತರಹದ ತಿಂಡಿಗಳನ್ನು ಒಳಗೊಂಡಿದೆ.