ಸಮಗ್ರ ನ್ಯೂಸ್: ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ನಡೆದ ಮಹಿಳೆಯೋರ್ವರ ಸಂಶಯಾಸ್ಪದ ಸಾವಿನ ಪ್ರಕರಣ ಕೊಲೆ ಎಂದು ಇದೀಗ ವೈದ್ಯಕೀಯ ವರದಿಗಳಿಂದ ದೃಢಪಟ್ಟಿದ್ದು, ಕೊಲೆ ಆರೋಪದಲ್ಲಿ ಮಹಿಳೆಯ ಪತಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಮೋಹಿನಿ(36) ಮೃತಪಟ್ಟವರಾಗಿದ್ದು, ಕೊಲೆ ಆರೋಪದಲ್ಲಿ ಆಕೆಯ ಪತಿ ಗಣೇಶ್(48)ನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಶನಿವಾರಸಂತೆ ನಿವಾಸಿಯಾಗಿರುವ ಗಣೇಶ್ ಸುಳ್ಯ ತಾಲೂಕು ಕೊಲ್ಲಮೊಗ್ರುವಿನ ಮೋಹಿನಿ ಅವರನ್ನು 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಬಳಿಕ ಪತಿ, ಪತ್ನಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ವಾಸವಾಗಿದ್ದರು.
ಗಣೇಶ್ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದು, ದಂಪತಿಗೆ 6 ವರ್ಷದ ಮಗನಿದ್ದಾನೆ. ಗಣೇಶ್‌ಗೆ ವಿಪರೀತ ಕುಡಿತದ ಚಟವಿದ್ದು ಇಬ್ಬರ ನಡುವೆ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ಆ. 30ರಂದು ಬೆಳಗ್ಗೆ ಮಹಿಳೆ ಮನೆ ಯಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಹಣೆಯ ಬಳಿ ಗಾಯವಾಗಿ ರಕ್ತ ಸ್ರಾವವಾಗಿತ್ತು. ಧರ್ಮಸ್ಥಳ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ಇದೀಗ ತನಿಖೆ ಮುಂದುವರಿದಿದ್ದು ವೈದ್ಯಕೀಯ ವರದಿಗಳ ಆಧಾರದ ಮೇಲೆ ಇದೊಂದು ಕೊಲೆ ಪ್ರಕರಣ ಎಂಬುದು ದೃಢಪಟ್ಟಿದೆ.
ದಂಪತಿಯ 6 ವರ್ಷದ ಮಗು ಅನಾಥವಾಗಿದ್ದು, ಪೊಲೀಸರು ಆ. 30ರಂದು ಮಗುವನ್ನು ಪಾಲನಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಮೋಹಿನಿ ಅವರು ಮದುವೆಯ ಬಳಿಕ ತಮ್ಮ ಮನೆಯವರ ಸಂಪರ್ಕ ಕಡಿದುಕೊಂಡಿದ್ದರು. ಶನಿವಾರ ಸಂತೆ ನಿವಾಸಿಯಾಗಿರುವ ಗಣೇಶ್‌ನ ಮನೆಯವರೂ ಆತನ ಸಂಪರ್ಕದಲ್ಲಿ ಇರ ಲಿಲ್ಲ. ಮಗುವಿನ ಪಾಲನೆಗೆ ಯಾರೂ ಮುಂದೆ ಬಂದಿರಲಿಲ್ಲ.