ಸಮಗ್ರ ನ್ಯೂಸ್: ಮಹಿಳೆಯೊಬ್ಬರಿಗೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವಾಜ್ ಹಾಕಿದ ಘಟನೆಯೊಂದು ವೈರಲ್ ಆಗಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದಾದ ಹಾನಿ ವೇಳೆ ವರ್ತೂರು ಕೆರೆಯ ಕೋಡಿ ಬಿದ್ದು ಅವಾಂತರ ಸೃಷ್ಟಿಯಾಗಿತ್ತು. ಈ ಹಿನ್ನಲೆಯಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಬೆಂಗಳೂರಿನ ವರ್ತೂರು ಕೆರೆ ವೀಕ್ಷಣೆಗೆ ತೆರಳಿದ್ದರು. ಆಗ ಮಹಿಳೆಯೊಬ್ಬರು ತಮ್ಮ ಸಮಸ್ಯೆಯನ್ನು ಮನವಿ ಪತ್ರದ ಮೂಲಕ ಶಾಸಕರಿಗೆ ತಿಳಿಸಲು ಮುಂದಾದರು. ಈ ವೇಳೆ ಮಹಿಳೆಯ ಕೈಯಲ್ಲಿದ್ದ ಪತ್ರ ಪಡೆಯಲು ಹೋದಾಗ , ಮಹಿಳೆ ಪತ್ರ ನೀಡದೇ ತಮ್ಮ ಮಾತು ಕೇಳಿ ಎಂದು ಒತ್ತಾಯಿಸುತ್ತಾರೆ. ಇದರಿಂದ ಕೋಪಗೊಂಡ ಶಾಸಕರು ಮಹಿಳೆಯ ಕೈಯಿಂದ ಪತ್ರ ಕಸಿದುಕೊಂಡು, ‘ನಿನಗೆ ಮಾನ ಮಾರ್ಯಾದೆ ಇದೆಯಾ? ನಾಚಿಕೆ ಆಗಲ್ವಾ? ಒದ್ದು ಒಳಗೆ ಹಾಕಿ , ಕರ್ಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕೂರಿಸಿ ಎಂದು ಅಲ್ಲಿದ್ದ ಸಿಬ್ಬಂದಿಗೆ ಸೂಚಿಸುತ್ತಾ ಎಂದು ಅವಾಜ್ ಹಾಕಿರುವ ಆರೋಪ ಕೇಳಿ ಬಂದಿದೆ
ಇದಕ್ಕೂ ಹಿಂದೆ ಜೂನ್ 10 ರಂದು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ, ಅರವಿಂದ ಲಿಂಬಾವಳಿ ಪುತ್ರಿ ರೇಣುಕಾ ಲಿಂಬಾವಳಿಯನ್ನು ಟ್ರಾಫಿಕ್ ಪೊಲೀಸರು ತಡೆದಿದ್ದರು. ಆಗ ಆಕೆ, ಪೊಲೀಸರ ಮೇಲೆ ಅವಾಜ್ ಹಾಕಿ, ‘ನಾನು ಅರವಿಂದ ಲಿಂಬಾವಳಿ ಮಗಳು’ ಎಂದು ದರ್ಪ ತೋರಿಸಿದ್ದರು. ಬಳಿಕ ಶಾಸಕರೇ ಪುತ್ರಿಯ ತಪ್ಪಿಗೆ ಕ್ಷಮಾಪಣೆ ಕೇಳಿದ್ದರು. ಆದರೆ, ಈಗ ಖುದ್ದು ಶಾಸಕರೇ ಸಮಸ್ಯೆ ಹೇಳಲು ಬಂದ ಮಹಿಳೆಯೊಬ್ಬರ ಮೇಲೆ ಅವಾಜ್ ಹಾಕಿದ್ದಾರೆ.