ಸಮಗ್ರ ನ್ಯೂಸ್: ಪೆರಂಪಳ್ಳಿ- ಮಣಿಪಾಲ ರಸ್ತೆಗಳ ಅವ್ಯವಸ್ಥೆ ಬಗ್ಗೆ ಸ್ಥಳೀಯ ಯುವತಿಯೊಬ್ಬರು ಉಡುಪಿ ಶಾಸಕ ರಘುಪತಿ ಭಟ್ ಅವರನ್ನು ತರಾಟೆಗೆ ತೆಗೆಕೊಂಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಇದಕ್ಕೆ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ.
ಈ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಉಡುಪಿಯ ಕೋಮಲ್, ನಾವು ಇಷ್ಟು ವರ್ಷಗಳಿಂದ ಟೋಲ್ ಕಟ್ಟುತ್ತಿದ್ದೇವೆ, ರಸ್ತೆ ತೆರಿಗೆ, ವಾಹನ ತೆರಿಗೆಗಳನ್ನು ಕಟ್ಟುತ್ತಿದ್ದೇವೆ. ಇದು ಯಾರ ಹೊಟ್ಟೆಗೆ ಮಣ್ಣು ಹಾಕಲು?, ನಾವು ಕೇಳಿದರೆ ರಸ್ತೆ ಮಾಡಿದ್ದೇವೆ, ಚರಂಡಿ ಮಾಡಿದ್ದೇವೆ ಹೇಳುತ್ತಾರೆ. ರಘುಪತಿ ಭಟ್ ಯಾವುದಾದರೂ ಕೆಲಸ ಸರಿಯಾಗಿ ಮಾಡಿದ್ದಾರೆಯೇ? ಅವರು ಮನೆಗೆ ಇದೇ ಪೆರಂಪಳ್ಳಿಯ ಮಾರ್ಗವಾಗಿ ಹೋಗುತ್ತಾರೆ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿವೆ. ಆದರೆ ಶಾಸಕರು ಸರಕಾರಿ ವಾಹನದಲ್ಲಿ ಹೋಗುತ್ತಾರೆ. ಅವರಿಗೆ ಈ ರಸ್ತೆಯಲ್ಲಿ ಹೊಂಡಗಳ ಪರಿವೇ ಇರುವುದಿಲ್ಲ. ನಾವು ಕಷ್ಟಪಟ್ಟು ಕಾರು, ಬೈಕು ತೆಗೆದುಕೊಳ್ಳುತ್ತೇವೆ. ನಮ್ಮ ವಾಹನ ಇಂತಹ ರಸ್ತೆಯಿಂದ ಅಪಘಾತಗಳು ಆದಾಗ ಹೇಗೆ ಆಗುತ್ತದೆ. ನಮ್ಮ ಕಣ್ಣ ಮುಂದೆ ಅಪಘಾತಗಳು ಆದಾಗ ಹೇಗೆ ಆಗುತ್ತದೆ. ನಮಗೇ ಏನಾದರೂ ಆದರೆ ನಾವು ಯಾರ ಬಳಿ ಹೋಗುವುದು. ಆಸ್ಪತ್ರೆ ಹಣ, ವಾಹನ ಹಣ ನೀವು ಕೊಡುತ್ತೀರಾ ಎಂದು ಅವರು ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.
ಇನ್ನು ಅಂಬಾಗಿಲು ಕಲ್ಸಂಕ ರಸ್ತೆಯಲ್ಲಿ ಗುಂಡಿ ಎಲ್ಲಿದೆ, ಮ್ಯಾನ್ ಹೋಲ್ ಎಲ್ಲಿದೆ ಎಂದೇ ಗೊತ್ತಾಗುವುದಿಲ್ಲ. ಮಂಗಳೂರಿನಲ್ಲಿ ಪ್ರಧಾನ ಮಂತ್ರಿ ಬರುತ್ತಾರೆ ಅಂತಾದರೂ ರಸ್ತೆ ದುರಸ್ತಿ ಆಗುತ್ತಿದೆ. ನಮ್ಮ ಊರಲ್ಲಿ ರಸ್ತೆ ಸರಿ ಆಗಬೇಕಾದರೆ ಯಾರು ಬರಬೇಕು. ನಿಮ್ಮ ಕಿಸೆಯ ಹಣ ತೆಗೆದು ರಸ್ತೆ ಸರಿ ಮಾಡುವುದು ಬೇಡ. ನಾವು ತೆರಿಗೆ ಕಟ್ಟುತ್ತಿದ್ದೇವೆ, ಅದೇ ತೆರಿಗೆ ಹಣ ತೆಗೆದು ನಮಗೆ ಒಂದು ಸರಿಯಾದ ರಸ್ತೆ ಮಾಡಿ ಕೊಡಿ ಎಂದು ಕೋಮಲ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಯುವತಿಯ ವೈರಲ್ ವಿಡಿಯೋಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್, ಮಣಿಪಾಲ ಪೆರಂಪಳ್ಳಿ ರಸ್ತೆಯ ಗಂಭೀರತೆಯ ಬಗ್ಗೆ ನನಗೆ ತಿಳಿದಿದೆ. ಅದು ಕಾಮಗಾರಿ ಸಂಪೂರ್ಣಗೊಂಡಿರುವ ರಸ್ತೆಯಲ್ಲ. ಅಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ಜೆಲ್ಲಿ ಹಾಕಿ ಸಣ್ಣ ಲೇಯರ್‌ನಲ್ಲಿ ಡಾಮರ್ ಹಾಕಲಾಗಿದೆಯೇ ಹೊರತು ಅದು ಸಂಪೂರ್ಣಗೊಂಡಿರುವ ಕಳಪೆ ಕಾಮಗಾರಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಈ ರಸ್ತೆಗೆ ಒಂದು ಬಾರಿ ಪ್ಯಾಚ್ ವರ್ಕ್ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಮಳೆ ಜೋರಾದ ಕಾರಣ ಮಳೆ ನೀರಿಗೆ ಪ್ಯಾಚ್ ವರ್ಕ್ ಕಿತ್ತು ಹೋಗಿದೆ. ಕಳೆದ ವರ್ಷದ ನವೆಂಬರ್ ಡಿಸೆಂಬರ್‌ನಲ್ಲಿ ಆರಂಭಿಸಿದ ಕಾಮಗಾರಿ ಇನ್ನೂ ಪೂರ್ಣ ಆಗಿಲ್ಲ. ಕಾಮಗಾರಿ ಸಂಪೂರ್ಣ ಆಗುವವರೆಗೆ ಸಮಸ್ಯೆ ಆಗುತ್ತದೆ. ಜನರು ಸಹಕಾರ ನೀಡಬೇಕು ಎಂದರು.