ಸಮಗ್ರ ನ್ಯೂಸ್: ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಶ್ರೀಗಳು ವಿರುದ್ಧ ಮಠದ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ.
ವಿದ್ಯಾರ್ಥಿನಿಯರ ಮೇಲೆ ಕಳೆದ ಕೆಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೈಸೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರ ದೂರಿನನ್ವಯ ಎಫ್‍ಐಆರ್ ದಾಖಲಿಸಲಾಗಿದೆ. ಕೋರ್ಟ್‍ನ ಮಾರ್ಗದರ್ಶನದಂತೆ ಇದೀಗ ಎಫ್‍ಐಆರ್ ಪ್ರತಿಯನ್ನು ಚಿತ್ರದುರ್ಗದ ಎಸ್ಪಿಗೆ ಕಳುಹಿಸಲಾಗಿದೆ. ಸ್ವಾಮೀಜಿಯ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ(ಪೋಕ್ಸೊ) ಅಡಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ ಮಠದ ಸ್ವಾಮೀಜಿಯಿಂದ ನಿರಂತರ ಲೈಂಗಿಕ ಕಿರುಕುಳ ಆರೋಪ ಮಾಡಿರುವ ವಿದ್ಯಾರ್ಥಿನಿಯರಿಬ್ಬರು ಮೈಸೂರಿನ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರವಾದ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಮಕ್ಕಳ ಕಲ್ಯಾಣ ಸಮಿತಿ ಬಾಲಕಿಯರ ವಿಚಾರಣೆ ನಡೆಸಿದೆ. ಮಠ ನಡೆಸುವ ಪ್ರೌಢಶಾಲೆಯಲ್ಲಿಯೇ ಈ ವಿದ್ಯಾರ್ಥಿನಿಯರು ಓದುತ್ತಿದ್ದಾರೆ.
ಸ್ವಾಮೀಜಿ ಬಳಿಗೆ ಹೋಗಲು ಒಪ್ಪದಿದ್ದರೆ ಹಾಸ್ಟೆಲ್ ಸಿಬ್ಬಂದಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಮುನ್ನ ಕುಟುಂಬಸ್ಥರಿಗೆ ಸಹಾಯ ಹಸ್ತ ನೀಡಲಾಗುತ್ತಿತ್ತು ಹಾಗೂ ನಂತರ ಲೈಗಿಂಕ ಉದ್ದೇಶಕ್ಕೆ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ. ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಹಣ್ಣು ಮತ್ತು ಸಿಹಿಯಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ಅತ್ಯಾಚಾರ ನಡೆಸುತ್ತಾರೆ ಎಂದು ದೂರಲಾಗಿದೆ. ಕಿರುಕುಳ ಪ್ರಶ್ನಿಸಿದ ಕಾರಣ ಹಾಸ್ಟೆಲ್‍ನಿಂದ ಹೊರ ಹಾಕಲಾಗುತ್ತಿತ್ತು ಎಂದು ನೊಂದ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಮುರುಗಾ ಶರಣರ ವಿರುದ್ಧ ಎಫ್‌ಐಆರ್:
ಲೈಂಗಿಕ ದೌರ್ಜನ್ಯ ಪ್ರಕರಣದಡಿ ಚಿತ್ರದುರ್ಗದ ಬೃಹನ್ಮಠದ ಶಿವಮೂರ್ತಿ ಮುರುಗಾ ಶರಣರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮುರುಘಾ ಶ್ರೀಗಳು ಸೇರಿ ಐವರ ವಿರುದ್ಧ ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಮುರುಘಾ ಶರಣರು A1 ಆರೋಪಿಯಾಗಿದ್ದಾರೆ. ಅಕ್ಕಮಹಾದೇವಿ ಹಾಸ್ಟೆಲ್‍ನ ವಾರ್ಡನ್ ರಶ್ಮಿ, ಮಠದ ಅನುಯಾಯಿ ಬಸವಾದಿತ್ಯ, ಮುಖ್ಯಸ್ಥ ಪರಶಿವಯ್ಯ ಹಾಗೂ ವಕೀಲ ಗಂಗಾಧರಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್ ದಾಖಲಿಸಿ ಪೊಲೀಸರು ಕೋರ್ಟ್‌ಗೆ ಸಲ್ಲಿಸಲಿದ್ದಾರೆ.