ಸಮಗ್ರ ನ್ಯೂಸ್: ಸುಳ್ಯ ನಗರದಲ್ಲಿ ರಸ್ತೆಯಲ್ಲಿ ಜನರಿಗೆ ಸಂಚಾರಕ್ಕೆ ತೀವ್ರ ತೊಂದರೆ ಆಗಿರುವ ಹೊಂಡಗಳನ್ನು ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್ ಅವರ ನೇತೃತ್ವದಲ್ಲಿ ತೇಪೆ ಹಾಕಲಾಗಿದೆ. ಈ ಮೂಲಕ ನ.ಪಂ ಗೆ ಆಗದ(!) ಕೆಲಸವನ್ನು ಸಾರ್ವಜನಿಕರು ಮಾಡಿದ್ದು ಶ್ಲಾಘನೆಗೆ ಕಾರಣವಾಗಿದೆ.
ಸುಳ್ಯ ನಗರ ಶ್ರೀರಾಂ ಪೇಟೆಯಲ್ಲಿ ಜ್ಯೂನಿಯರ್ ಕಾಲೇಜು ಕ್ರಾಸ್ ರಸ್ತೆಯಲ್ಲಿ ಮತ್ತು ರಥ ಬೀದಿಯಲ್ಲಿ ನಿರ್ಮಾಣವಾದ ಹೊಂಡಕ್ಕೆ ಸಿಮೆಂಟ್ ಜಲ್ಲಿ ಮಿಕ್ಸ್ ಹಾಕಿ ಹೊಂಡ ತುಂಬಿ ತೇಪೆ ಹಾಕಲಾಗಿದೆ.
ಸುಳ್ಯ ನಗರದ ರಸ್ತೆಗಳಲ್ಲಿ ನಿರ್ಮಾಣವಾದ ಹೊಂಡದ ಬಗ್ಗೆ ಕಳೆದ ಕೆಲದಿನಗಳ ಹಿಂದೆ ಆರ್‌ಜೆ ತ್ರಿಶೂಲ್ ಅವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹಾಗು ತ್ರಿಶೂಲ್ ಮಧ್ಯೆ ವಿವಾದ ಸೃಷ್ಟಿಯಾಗಿ ಪ್ರಕರಣ ತೀವ್ರ ವಿವಾದಕ್ಕೂ ಕಾರಣವಾಗಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹೊಂಡ ಸೃಷ್ಠಿಯಾಗಿ ಸುಮಾರು ಒಂದೂವರೆ ತಿಂಗಳಿನಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದ್ದರೂ, ಭಾರೀ ಚರ್ಚೆ, ವಿವಾದ ಉಂಟಾದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಾಗಲೀ ನಗರ ಪಂಚಾಯತ್ ಆಗಲೀ ರಸ್ತೆಯ ಗುಂಡಿಯನ್ನು ಮುಚ್ಚಿಸುವ ಗೋಜಿಗೆ ಹೋಗಿರಲಿಲ್ಲ.
ಆ.27ರಂದು ಜ್ಞಾನೇಶ್ ಅವರು ತಮ್ಮ ಕೆಲಸದವರೊಂದಿಗೆ ವಿವಿಧ ಕಡೆಗಳಲ್ಲಿರುವ ಹೊಂಡಗಳನ್ನು ಸಿಮೆಂಟ್ ಜಲ್ಲಿ ಮಿಕ್ಸ್ ಹಾಕಿ ಮುಚ್ಚಿಸಿದ್ದಾರೆ. ಜ್ಞಾನೇಶ್ ಅವರ ಕೆಲಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.