Ad Widget .

ಸುಳ್ಯ: ಶಿಲಾಯುಗ ಕಾಲದ ಬೃಹತ್ ಕಲ್ಲು ಪತ್ತೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿಂತಿಕಲ್ಲು ಊರಿನಲ್ಲಿ ಬೃಹತ್ ಶಿಲಾಯುಗ ಕಾಲದ ನಿಲ್ಸ್ಕಲ್ ಮಾದರಿಯ ಸಮಾಧಿ ಕಂಡು ಬಂದಿದೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿಯವರು ತಿಳಿಸಿರುತ್ತಾರೆ.

Ad Widget . Ad Widget .

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ಮಾದರಿಯ ಬೃಹತ್ ಶಿಲಾಯುಗದ ಸಮಾಧಿ ಪತ್ತೆಯಾಗಿದೆಯೆಂದು ಅವರು ತಿಳಿಸಿದ್ದಾರೆ. ಸಮಾಧಿಯ ಆಸುಪಾಸಿನಲ್ಲಿ ಅಥವಾ ಸಮಾಧಿಯ ಮೇಲೆ, ಸಮಾಧಿಯನ್ನು ಗುರುತಿಸಲು ಸುಮಾರು 7 ರಿಂದ 15-16 ಅಡಿ ಎದ್ದದ ಒರಟು ಕಲ್ಲಿನ ಕಂಭಗಳನ್ನು ಬೃಹತ್ ಶಿಲಾಯುಗ ಕಾಲದಲ್ಲಿ ನಿಲ್ಲಿಸುವ ಪದ್ಧತಿ ಕಂಡು ಬರುತ್ತದೆ. ಇಂತಹ ನಿಲುವು ಕಲ್ಲುಗಳನ್ನು ದಕ್ಷಿಣ ಭಾರತದ ಎಲ್ಲಡೆ ನಿಂತಿಕಲ್, ನಿಲ್ಸ್ಕಲ್, ಆನೆಕಲ್ಲು, ಗರ್ಭಿಣಿಯರ ಕಲ್ ಮತ್ತು ರಕ್ಕಸಗಲ್ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.

Ad Widget . Ad Widget .

ಸುಳ್ಯ ತಾಲೂಕಿನ ನಿಂತಿಕಲ್ಲು ಊರಿನಲ್ಲಿರುವ ಸ್ಥಳೀಯ ದಯಾನಂದ ಗೌಡರ ಮನೆಯ ಪಕ್ಕದ ಅಂಗಳದಲ್ಲಿದೆ. ಈ ಕಲ್ಲಿನ ಸುತ್ತ ತೀರಾ ಇತ್ತೀಚಿಗೆ, ವೃತ್ತಾಕಾರದ ಸಿಮೆಂಟಿನ ಕಟ್ಟೆಯೊಂದನ್ನು ಕಟ್ಟಲಾಗಿದೆ. ಆದ್ದರಿಂದ ನಿಂತಿಕಲ್ ನ ಅರ್ಧಭಾಗ ಕಟ್ಟೆಯ ಒಳಭಾಗದಲ್ಲಿ ಸೇರಿಹೋಗಿದ್ದು, ಉಳಿದ ಮೇಲಿನ ಭಾಗ ಯಥಾವತ್ತಾಗಿ ಕಾಣುತ್ತದೆ. ಕಲ್ಲನ್ನು ಪೂರ್ವೋತ್ತರವಾಗಿ ಸ್ವಲ್ಪ ಬಾಗಿಸಿ ನಿಲ್ಲಿಸಲಾಗಿದೆ. ಒರಟಾದ ಈ ಕಲ್ಲಿನ ಮೇಲ್ಭಾಗ ಕೋನಾಕೃತಿಯಲ್ಲಿದ್ದು ಕೆಳಭಾಗ ಅಗಲವಾಗಿ ಕೆಳಗೆ ಮುಂದುವರಿದಂತಿದೆ.

ಈ ಕಲ್ಲು ಕೊಡಗಿನ ಸಿದ್ದಲಿಂಗಾಪುರದಲ್ಲಿ ಕಂಡು ಬಂದಿರುವ ನಿಲ್ಸ್ಕಲ್ ನ್ನು ಬಹುವಾಗಿ ಹೋಲುತ್ತದೆ. ಈ ನಿಂತಿಕಲ್ ನಿಂದಾಗಿಯೇ ಆ ಸ್ಥಳಕ್ಕೆ ನಿಂತಿಕಲ್ಲು ಎಂಬ ಹೆಸರು ಪ್ರಾಪ್ತವಾಗಿದೆ ಎಂಬುದು ಸುಸ್ಪಷ್ಟ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಲ್ಸ್ಕಲ್ ಎಂಬ ಗ್ರಾಮದ ಹೆಸರೂ ಸಹ ಆ ಊರಿನಲ್ಲಿರುವ ನಿಲಿಸು ಕಲ್ಲುಗಳಿಂದಲೇ ನಿಲ್ಸ್ಕಲ್ ಎಂದು ಕರೆಯಲ್ಪಟ್ಟಿದೆ.

ಉಡುಪಿ ಜಿಲ್ಲೆಯ ಬಸ್ರೂರು, ನಿಟ್ಟೂರು ಮತ್ತು ಸುಭಾಷ್ ನಗರಗಳಲ್ಲಿಯೂ ಸಹ ನಿಲ್ಸ್ಕಲ್ ಸಮಾಧಿಗಳು ಕಂಡುಬಂದಿವೆ. ಉಡುಪಿ ಜಿಲ್ಲೆಯಲ್ಲಿ ಅವುಗಳನ್ನು ಗರ್ಭಿಣಿಯರ ಕಲ್ಲು, ಎಂದು ಜನಸಾಮಾನ್ಯರು ಗುರುತಿಸುತ್ತಾರೆ. ನಿಂತಿಕಲ್ಲು ಗ್ರಾಮದ ಕಲ್ಲನ್ನು ಸಹ ಸ್ಥಳೀಯರು ನಿಂತಿಕಲ್ ಎಂದೇ ಕರೆಯುತ್ತಾರೆ. ಆದರೆ, ಈಗ ಅದನ್ನು ವನದುರ್ಗಾ ಕಟ್ಟೆ ಎಂಬ ಹೊಸ ಹೆಸರಿನಿಂದ ಪೂಜಿಸಲಾಗುತ್ತಿದೆ. ಕಟ್ಟೆಯನ್ನು ಕಟ್ಟುವ ಸಮಯದಲ್ಲಿ ಆ ಕಲ್ಲಿನ ಸುತ್ತಾ ಭೂಮಿಯನ್ನು ಅಗೆದಾಗ ಕೆಂಪು ಬಣ್ಣದ ದಪ್ಪನೆಯ ಮಡಕೆ ಚೂರುಗಳು ದೊರೆತಿದ್ದವೆಂದು ಸ್ಥಳೀಯ ದಯಾನಂದ ಗೌಡರು ತಿಳಿಸಿದ್ದು, ಬಹುಶಃ ಕುಂಭ ಸಮಾಧಿಯ ಮೇಲೆ ಆ ಕಲ್ಲನ್ನು ನಿಲ್ಲಿದ್ದ ಸಾದ್ಯತೆಯಿದೆ. ಈ ಸಂಶೋಧನೆಯಲ್ಲಿ, ಉಡುಪಿ ಬೈಲೂರಿನ ವಿವೇಕ್ ಮಾಸ್ಟರ್, ಶ್ರೇಯಸ್ ಕೊಳಪೆ, ದಯಾನಂದ ಗೌಡ, ನಿಶ್ಚಿತ್ ಗೋಳಿತಡಿ, ನನ್ನ ವಿದ್ಯಾರ್ಥಿಗಳಾದ ಪ್ರತೀಕಾ, ದಿಶಾಂತ್, ಅರಣ್ ಮತ್ತು ವಿಶಾಲ್ ರೈ ಪುತ್ತೂರು ಸಹರಿಸಿದ್ದಾರೆ.

Leave a Comment

Your email address will not be published. Required fields are marked *