ಸಮಗ್ರ ನ್ಯೂಸ್: ಪ್ರೀತಿಸಿ ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಹೃದಯಾಘಾತದಿಂದ ಸಾವನಪ್ಪಿದ ಯುವಕನ ಮೃತದೇಹ ಪಡೆಯಲು ಬಂದ ಸಂಬಂಧಿಕರು, ಈತನ ಬಾಣಂತಿ ಪತ್ನಿ ಹಾಗೂ 20 ದಿನದ ಮಗುವನ್ನು ತಿರಸ್ಕರಿಸಿ ತೆರಳಿದ ಅಮಾನವೀಯ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿಯಲ್ಲಿ ಮೆಕಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಯ್ಯಪ್ಪ ಎನ್ನುವವರು ಎರಡು ವರ್ಷಗಳ ಹಿಂದೆ ಗಂಗಾವತಿ ಮೂಲದ ಯುವತಿಯನ್ನು ಪ್ರೀತಿಸಿದ್ದರು. ಅವರಿಬ್ಬರ ಮದುವೆಗೆ ಎರಡೂ ಕುಟುಂಬಸ್ಥರಿಂದಲೂ ತೀವ್ರ ವಿರೋಧವಿತ್ತು. ಮನೆಯವರ ವಿರೋಧದ ನಡುವೆಯೂ ಪ್ರೇಮಿಗಳು ಮದುವೆಯಾಗಿದ್ದರು.
ಇವರಿಬ್ಬರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. 20 ದಿನದ ಹಿಂದಷ್ಟೇ ಅಯ್ಯಪ್ಪನ ಪತ್ನಿ ಮಗುವಿಗೆ ಜನ್ಮ ನೀಡಿದ್ದರು. ಪ್ರೀತಿಯ ಪ್ರತೀಕವಾಗಿ ಮಗು ಜನಿಸಿದ ಖುಷಿಯಲ್ಲಿದ್ದ ದಂಪತಿ ಬಾಳಲ್ಲಿ ವಿಧಿ ಆಡಬಾರದ ಆಟವಾಡಿಬಿಟ್ಟಿದೆ. ಸುಖ ಜೀವನಕ್ಕೆ ಇನ್ನೇನು ಬೇಕಿಲ್ಲ, ಪತ್ನಿ ಮತ್ತು ಮಗು ಜತೆ ಪ್ರತಿ ಕ್ಷಣವನ್ನೂ ಕಳೆಯಬೇಕು ಅಂದುಕೊಂಡಿದ್ದ ಅಯ್ಯಪ್ಪ ಹೃದಯಾಘಾತಕ್ಕೆ ಬಲಿಯಾಗುತ್ತಾರೆ.
ಅಯ್ಯಪ್ಪ ನಿಧನರಾದ ಸುದ್ದಿಯನ್ನು ಪೊಲೀಸರು ಕುಟುಂಬಸ್ಥರಿಗೆ ತಿಳಿಸಿದ್ದು, ಮೃತದೇಹವನ್ನು ಸ್ವೀಕರಿಸಲು ಒಪ್ಪಿದ್ದಾರೆ. ಆದರೆ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗುವನ್ನು ಸ್ವೀಕರಿಸಿಲು ನಿರಾಕರಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಅಯ್ಯಪ್ಪ ಅವರ ಹೆಂಡತಿ ಮತ್ತು 20 ದಿನದ ಮಗುವನ್ನು ಸಖಿ ಸೆಂಟರ್ಗೆ ದಾಖಲಿಸಲಾಗಿದೆ. ಮೃತದೇಹವನ್ನು ಆಂಬುಲೆನ್ಸ್ ಮೂಲಕ ಬಾದಾಮಿಗೆ ರವಾನಿಸಲಾಗಿದೆ.
ಗಂಡನ ಅಕಾಲಿಕ ಸಾವಿನಿಂದ ಕಂಗೆಟ್ಟ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. ತಂದೆಯನ್ನು ಕಳೆದುಕೊಂಡ ಇನ್ನೂ ಅರಿಯದ ಹಸುಗೂಸನ್ನು ನೋಡಿದರೆ ಎಂತವರ ಮನವೂ ಕಲಕುತ್ತೆ. ಇಂತಹ ದಯನೀಯ ಸ್ಥಿತಿಯಲ್ಲೂ ಸೊಸೆ-ಮೊಮ್ಮಗುವನ್ನು ಬಿಟ್ಟು ಅಯ್ಯಪ್ಪ ಮೃತದೇಹವನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗಿದ್ದಾರೆ.
ಈಕೆಯ ಔಷಧೋಪಾಚಾರ ಹಾಗೂ ಸೂಕ್ತ ಆರೈಕೆ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಗಮನ ಹರಿಸಬೇಕು. ಪ್ರೇಮ ವಿವಾಹವಾಗಿರುವುದರಿಂದ ಎರಡೂ ಕಡೆಯ ಕುಟುಂಬದ ಜತೆಗೆ ಮಾತುಕತೆ ನಡೆಸಿ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗು ಬೀದಿ ಪಾಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಕರಣವನ್ನು ಮುತುವರ್ಜಿಯಿಂದ ನಿಭಾಯಿಸಿ ತಾಯಿ, ಮಗುವಿಗೆ ರಕ್ಷಣೆ ನೀಡುವಂತೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರು ಒತ್ತಾಯಿಸಿದ್ದಾರೆ.