ಸಮಗ್ರ ನ್ಯೂಸ್: ಹೆಲ್ಮೆಟ್ ಧರಿಸದ ಲೈನ್ ಮ್ಯಾನ್ ಗೆ ಪೊಲೀಸರು ಆರು ಸಾವಿರ ರೂಪಾಯಿ ದಂಡ ವಿಧಿಸಿದ್ದ ಘಟನೆಯ ನಂತರ ಇದರಿಂದ ಆಕ್ರೋಶಗೊಂಡ ಲೈನ್ ಮ್ಯಾನ್ ಠಾಣಾ ಭವನ್ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸೇಡು ತೀರಿಸಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿರುವುದಾಗಿ ವರದಿ ವಿವರಿಸಿದೆ.
ಲೈನ್ ಮ್ಯಾನ್ ಮೊಹಮ್ಮದ್ ಮೆಹತಾಬ್ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
” ನನ್ನ ತಿಂಗಳ ಸಂಬಳ 5,000 ಸಾವಿರ ರೂಪಾಯಿ. ಆದರೆ ಪೊಲೀಸರು ನನಗೆ ಹೆಲ್ಮೆಟ್ ಧರಿಸದಿರುವುದಕ್ಕೆ 6,000 ಸಾವಿರ ರೂ. ದಂಡ ವಿಧಿಸಿದ್ದಾರೆ. ಇನ್ನು ಮುಂದೆ ಹೀಗೆ ಮಾಡಲ್ಲ, ಇದೊಂದು ಬಾರಿ ಬಿಟ್ಟು ಬಿಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದೆ. ಆದರೆ ಅವರು ನನಗೆ ಯಾವುದೇ ಕರುಣೆ ತೋರಿಸದೇ ದಂಡ ವಿಧಿಸಿರುವುದಾಗಿ ಮೆಹತಾಬ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿರುವುದಾಗಿ ವರದಿ ಹೇಳಿದೆ.
ಆದರೆ ಪೊಲೀಸ್ ಠಾಣೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾನೆ. ಆದರೆ ಪೊಲೀಸ್ ಠಾಣೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ವಿದ್ಯುತ್ ಇಲಾಖೆ ಬೇರೆ ಕಾರಣವನ್ನು ನೀಡಿದೆ.
ಠಾಣಾ ಭವನ್ ಪೊಲೀಸ್ ಠಾಣೆಯ ಸುಮಾರು 55,000 ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದ್ದು, ಈ ಕಾರಣದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಜೂನಿಯರ್ ಇಂಜಿನಿಯರ್ ಅಮಿತೇಶ್ ಮೌರ್ಯ ತಿಳಿಸಿದ್ದು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವುದಾಗಿ ವರದಿ ಹೇಳಿದೆ.