ಟರ್ಕಿ: ಕಾರಿನ ಅಪಘಾತ ನಡೆದ ವೇಳೆ ಅದಕ್ಕೆ ಪ್ರತಿಸ್ಪಂದಿಸುತ್ತಿದ್ದ ಜನರ ಮೇಲೆ ವೇಗವಾಗಿ ಬಂದ ಬಸ್ ನಿಯಂತ್ರಣಕ್ಕೆ ಬಾರದೇ ವಾಹನಗಳಿಗೆ ಡಿಕ್ಕಿ ಹೊಡೆದು ಜನರ ಮೇಲೆ ಹರಿದ ಘಟನೆಯೊಂದು ಆಗ್ನೇಯ ಟರ್ಕಿ ಗಾಜಿಯಾಂತೆಪ್ ನಗರದಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಗಾಜಿಯಾಂತೆಪ್ ಮತ್ತು ನಿಜಿಪ್ ನಡುವಿನ ಹೆದ್ದಾರಿಯಲ್ಲಿ ಕಾರು ಪಲ್ಟಿಯಾಗಿ ನಾಲ್ವರು ಗಾಯಗೊಂಡಿದ್ದರು. ಪೊಲೀಸ್ ಮತ್ತು ವೈದ್ಯರ ತಂಡ ಗಾಯಗೊಂಡವರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಸಿದ್ದತೆಯಲ್ಲಿತ್ತು.
ಘಟನೆಯ ವೇಳೆ ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದರು. ಈ ವೇಳೆ ಬಸ್ ವೇಗವಾಗಿ ಬಂದು ನಿಯಂತ್ರಣಕ್ಕೆ ಬಾರದೆ ಅಡ್ಡಾದಿಡ್ಡಿಯಾಗಿ ಚಲಿಸಿದೆ. ಕಾರುಗಳಿಗೆ ಡಿಕ್ಕಿ ಹೊಡೆದು ಜನರ ಮೇಲೆ ಹರಿದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ 15 ಮಂದಿಯಲ್ಲಿ ಮೂವರು ಅಗ್ನಿಶಾಮಕ ದಳದವರು, ಇಬ್ಬರು ಅರೆವೈದ್ಯರು ಮತ್ತು ಇಬ್ಬರು ಪತ್ರಕರ್ತರು ಸೇರಿದ್ದಾರೆ, ಬಸ್ಸಿನಲ್ಲಿ ಎಂಟು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಆಂತರಿಕ ಸಚಿವ ಸುಲೇಮಾನ್ ಸೋಯ್ಲು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಅಪಘಾತದಲ್ಲಿ ಇಪ್ಪತ್ತು ಜನರು ಗಾಯಗೊಂಡಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ದಾವುತ್ ಗುಲ್ ಶನಿವಾರ ತಿಳಿಸಿದ್ದಾರೆ.