ಸಮಗ್ರ ನ್ಯೂಸ್: ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗುವುದನ್ನು ನಿರ್ಬಂಧಿಸುವಂತೆ ಕೋರಿದ್ದ ಪಿಐಎಲ್ ಅನ್ನು ಪುರಸ್ಕರಿಸಲು ನಿರಾಕರಿಸಿರುವ ಹೈಕೋರ್ಟ್ ಅಜಾನ್ ನಿಂದ ಜನರ ಮೂಲಭೂತ ಹಕ್ಕು ಮೊಟಕುಗೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಬೆಂಗಳೂರಿನ ಆರ್. ಚಂದ್ರಶೇಖರ್ ಸಲ್ಲಿಸಿದ್ದ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಅರ್ಜಿದಾರರ ಪರ ವಕೀಲರು ಅಜಾನ್ ನಲ್ಲಿರುವ ವಿಚಾರಗಳು ಇತರ ಧರ್ಮಗಳ ಅನುಯಾಯಿಗಳ ಭಾವನೆಗಳಿಗೆ ನೋವುಂಟು ಮಾಡುವುದರಿಂದ ಅದನ್ನು ಧ್ವನಿವರ್ಧಕಗಳ ಮೂಲಕ ಕೂಗುವುದನ್ನು ತಡೆಯಬೇಕು. ದಿನಕ್ಕೆ 5 ಬಾರಿ ಅಜಾನ್ ಕೂಗುವುದರಿಂದ ಇತರೆ ಧಾರ್ಮಿಕ ಅನುಯಾಯಿಗಳ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ ಎಂದು ವಾದ ಮಂಡಿಸಿದರು.
ಅರ್ಜಿದಾರರ ವಾದ ಒಪ್ಪದ ಹೈಕೋರ್ಟ್, ಸಂವಿಧಾನದ ಪರಿಚ್ಛೇದ 25(1) ರ ಅಡಿಯಲ್ಲಿ ಪ್ರತಿ ವ್ಯಕ್ತಿಯೂ ತನ್ನ ಧರ್ಮವನ್ನು ಆಚರಿಸುವ, ಪ್ರದರ್ಶಿಸುವ ಮತ್ತು ಪ್ರಚಾರ ಮಾಡುವ ಹಕ್ಕು ಹೊಂದಿರುತ್ತಾನೆ. ಇದೇ ವೇಳೆ ಧ್ವನಿವರ್ಧಕಗಳು ನಿಗದಿತ ಡೆಸಿಬಲ್ ಗಿಂತ ಹೆಚ್ಚಿನ ಶಬ್ದವಾಗದಂತೆ ಸರ್ಕಾರಿ ಪ್ರಾಧಿಕಾರಿಗಳ ಕ್ರಮ ಜರುಗಿಸಬೇಕೆಂದು ನ್ಯಾಯಪೀಠ ನಿರ್ದೇಶಿಸಿದೆ.