ಗದಗ : ಇಲ್ಲಿನ ಮುನ್ಸಿಪಲ್ ಕಾಲೇಜ್‌ನಲ್ಲಿ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇತೃತ್ವದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದು, ಗದಗದ ಮುನ್ಸಿಪಲ್ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಮತ್ತು ಅವರ ಪುತ್ರ ಸಮೀತ ಕುಮಾರ್ ಪ್ರಶ್ನೆ ಪತ್ರಿಕೆಯನ್ನು ಸೋರಿಕೆಯ ಸೂತ್ರದಾರರಾಗಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗಾಗಿ ನಡೆಸಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. 2022ರ ಆಗಸ್ಟ್ 7ರಂದು ಪರೀಕ್ಷೆ ನಡೆದಿತ್ತು. ಪತ್ರಕರ್ತರ ಸೋಗಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಸಮೀತ ಕುಮಾರ್ ತನ್ನ ಮೊಬೈಲ್‌ನಲ್ಲಿ ಪ್ರಶ್ನೆ ಪತ್ರಿಕೆಯ ಫೊಟೋ ತೆಗೆದುಕೊಂಡಿದ್ದ ಎನ್ನಲಾಗಿದೆ. ನಂತರ ಇವನು ರಾಜ್ಯದ ಬೇರೆ ಬೇರೆ ಕಡೆಗೆ ಪ್ರಶ್ನೆ ಪತ್ರಿಕೆಯನ್ನು ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ.
ಗದಗ-ಬೆಟಗೇರಿಯ ಅವಳೀ ನಗರದ 21 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪೈಕಿ ಮುನ್ಸಿಪಲ್ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಪ್ರಶ್ನೆ ಪತ್ರಿಕೆ ಸೋರಿಕೆಯ ಜಾಡು ಹಿಡಿದು ಮುನ್ಸಿಪಲ್ ಕಾಲೇಜಿಗೆ ತಲುಪಿದ್ದರು. ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಮತ್ತು ಅವರ ಪುತ್ರ ಸಮೀತ ಕುಮಾರ್‌ನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಈಗಾಗಲೇ ಕಾಲೇಜು ಪ್ರಾಚಾರ್ಯ ಕುಲಕರ್ಣಿ ಅವರನ್ನು ಸೈಬರ್ ಪೊಲೀಸರು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಪ್ರಾಚಾರ್ಯರು ಕಣ್ಣೀರಿಟ್ಟಿದ್ದಾರೆ. ಇದೀಗ ಸಮೀತ ಕುಮಾರ್‌ನ ಮೊಬೈಲ್ ಫೋನ್‌ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.