ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರೊಬ್ಬರನ್ನು ಟಾರ್ಗೆಟ್ ಮಾಡಿ, ಭಾರತದಲ್ಲಿ ಸ್ಫೋಟ ನಡೆಸಲು ಹೊಂಚು ಹಾಕಿದ್ದ ಐಸಿಸ್ ಉಗ್ರನನ್ನು ರಷ್ಯಾದ ಭದ್ರತಾ ಪಡೆಗಳು ಬಂಧಿಸಿವೆ. ಈ ಬಗ್ಗೆ ಸ್ವತಃ ರಷ್ಯಾವೇ ಅಧಿಕೃತವಾಗಿ ಮಾಹಿತಿ ನೀಡಿದ್ದು, ಭಾರತದಲ್ಲಿ ನಡೆಯಬಹುದಾಗಿದ್ದ ದೊಡ್ಡ ಅನಾಹುತವನ್ನು ಭಾರತದ ಸ್ನೇಹಿತ ರಷ್ಯಾ ತಡೆದಂತಾಗಿದೆ.
ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್ (ಎಫ್ ಎಸ್ ಬಿ) ಸೋಮವಾರ (ಆ.22) ರಂದು ಇಸ್ಲಾಮಿಕ್ ಸ್ಟೇಟ್ ಆತ್ಮಾಹುತಿ ದಾಳಿಕೋರನನ್ನು ಬಂಧಿಸಿದ್ದು, ಆತ ಭಾರತದ ಪ್ರಮುಖ ನಾಯಕನ ಹತ್ಯೆಗೆ ಸಂಚು ರೂಪಿಸುತ್ತಿದ್ದದ್ದನ್ನು ರಷ್ಯಾ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ.
ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ ಇಂದು ಐಸಿಸ್ ಉಗ್ರನ ಬಗ್ಗೆ ಮಾಹಿತಿಯನ್ನು ನೀಡಿದೆ. ಅಝಾಮೌ ಈ ಉಗ್ರ ಮೂಲತಃ ಟರ್ಕಿಯವನಾಗಿದ್ದು, ಅಲ್ಲೇ ಐಸಿಸ್ ಅನ್ನು ಕೂಡ ಈತ ಸೇರಿಕೊಂಡಿರ್ತಾನೆ. ಬಂಧಿತ ಉಗ್ರ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೂಲಕ ಭಾರತದ ಆಡಳಿತ ಪಕ್ಷದ ಪ್ರಮುಖನೋರ್ವನನ್ನು ಹತ್ಯೆ ಮಾಡುವ ಯೋಜನೆ ಹೊಂದಿದ್ದ ಎಂದು ಎಫ್‌ಎಸ್ ಬಿ ಸಂಸ್ಥೆ ತಿಳಿಸಿದೆ.
ಬಂಧಿತ ಉಗ್ರನನ್ನು ಐಎಸ್ ನಾಯಕರು ಆತ್ಮಾಹುತಿ ಬಾಂಬರ್ ಆಗಿ ಟರ್ಕಿಯಲ್ಲಿ ನೇಮಿಸಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಬೆಳವಣಿಗೆಗಳು ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.