ಸಮಗ್ರ ನ್ಯೂಸ್: ಮಂಗಳೂರಿನಿಂದ ಪುತ್ತೂರಿಗೆ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ರಸ್ತೆಯ ಅವ್ಯವಸ್ಥೆಯಿಂದಾಗಿ ಬೆನ್ನು ಹುರಿ ಮುರಿದುಕೊಂಡ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.
ಸುಳ್ಯದ ಬೆಳ್ಳಾರೆ ಮೂಲದ ವಿಜಯಕುಮಾರ್ ಎಂಬವರು ಗಾಯಗೊಂಡವರು. ಇವರು ಮಂಗಳೂರಿನಿಂದ ಪುತ್ತೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಸ್ಸು ಒಮ್ಮಿಂದೊಮ್ಮೆಲೆ ಗುಂಡಿಗೆ ಬಿದ್ದು ಹಾರಿದ್ದು, ಹಿಂಬದಿ ಸೀಟಿನಲ್ಲಿದ್ದ ವಿಜಯ್ ಸೀಟಿನಿಂದ ಎಸೆಯಲ್ಪಟ್ಟು, ತನ್ನ ಸೊಂಟಕ್ಕೆ ಏಟು ತಗುಲಿ ಗಂಭೀರಗೊಂಡಿದ್ದಾರೆ.
ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿಜಯ ಕುಮಾರ್ ರವರು ಸೀಟಿನಿಂದ ಮೇಲಕ್ಕೆ ಎಸೆಯಲ್ಪಟ್ಟು ಬೀಳುವಾಗ ಬಸ್ಸಿನ ಸೀಟಿನ ರಾಡ್ ಸೊಂಟಕ್ಕೆ ತಾಗಿ ಗಂಭೀರ ಗಾಯಗೊಂಡರಲ್ಲದೆ, ಸೊಂಟದಿಂದ ಕೆಳಭಾಗ ಸ್ಪರ್ಶ ಕಳೆದುಕೊಂಡು, ಬಸ್ಸಿನೊಳಗೆ ಬೊಬ್ಬೆ ಹೊಡೆದರೆನ್ನಲಾಗಿದೆ. ತಕ್ಷಣ ಬಸ್ಸು ನಿಲ್ಲಿಸಿದ ಚಾಲಕ ಗಂಭೀರ ಸ್ಥಿತಿಯಲ್ಲಿದ್ದ ವಿಜಯರವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.
ವೆನ್ಲಾಕ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಬೆನ್ನುಹುರಿ ಹಾಗೂ ಕುತ್ತಿಗೆ ಸಮೀಪದ ಎಲುಬು ಜಖಂಗೊಂಡಿದ್ದು ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದಾರೆ.
ರಸ್ತೆಯ ಅಭಿವೃದ್ಧಿ ಕಾಮಗಾರಿ ಕೆಲಸಗಳು ನಡೆಯುತ್ತಿದ್ದು, ರಸ್ತೆಯಲ್ಲಿ ಸಮರ್ಪಕ ಕಾಮಗಾರಿಯ ನಿರ್ವಹಣೆ ಇಲ್ಲದೇ ಇರುವುದು ಹಾಗೂ ಬಸ್ಸು ಚಾಲಕನ ನಿರ್ಲಕ್ಷ್ಯತನದ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದ್ದು, ಬಸ್ ಚಾಲಕ ಅಬ್ದುಲ್ ಎಂಬವರ ಮೇಲೆ ಬಂಟ್ವಾಳ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.