ಸಮಗ್ರ ನ್ಯೂಸ್: ತಾಲೂಕಿನ ಸಮಗ್ರ ಆಡಳಿತವನ್ನು ನೋಡಿಕೊಳ್ಳುವ ಸುಳ್ಯ ತಾಲೂಕು ದಂಡಾಧಿಕಾರಿಗಳ ಕಚೇರಿ ರಾತ್ರಿ ವೇಳೆ ಪುಂಡಪೋಕರ ಅಡ್ಡೆಯಾಗುತ್ತಿದೆಯಾ? ಹೀಗೊಂದು ಪ್ರಶ್ನೆ ಇದೀಗ ಕಾಡುತ್ತಿದೆ.

ಹೌದು, ಸುಳ್ಯ ತಾಲೂಕು ಕಚೇರಿ ಹಗಲು ಹೊತ್ತಿನಲ್ಲಿ ಆಡಳಿತ ವರ್ಗದವರ ಕಚೇರಿ ಕೆಲಸಗಳಿಗೆ ಸೀಮಿತವಾಗಿದ್ದರೆ ಸಂಜೆ ಮಬ್ಬುಹರಿಯುತ್ತಿದ್ದಂತೆ ಪುಂಡರ ಆವಾಸ ತಾಣವಾಗಿ ಬದಲಾಗುತ್ತದೆ. ಸಂಜೆ ವೇಳೆಗೆ ಕಚೇರಿ ಮುಗಿಸಿ ಅಧಿಕಾರಿಗಳು ತಮ್ಮ ನಿವಾಸದತ್ತ ತೆರಳುತ್ತಿದ್ದಂತೆ ತಾಲೂಕು ಕಚೇರಿ ಸುತ್ತಮುತ್ತ ಅನೈತಿಕ ಚಟುವಟಿಕೆಗಳು ಗರಿಗೆದರುತ್ತವೆ. ಇದಕ್ಕೆ ಪೂಕರವಾಗಿ ಕೆಲವೊಂದು ದೃಶ್ಯಗಳು ಸಾಕ್ಷಿಯಾಗಿವೆ. ಕಚೇರಿಯ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದು, ಬಿಯರ್ ಬಾಟಲ್ ಗಳು, ಸಿಗರೇಟ್ ಪ್ಯಾಕೆಟ್ ಗಳು ಕಂಡುಬರುತ್ತಿವೆ.

ಯಾಕಾಗ್ತಿದೆ ಈ ಸಮಸ್ಯೆ?
ತಾಲೂಕು ಕಚೇರಿ ಇತ್ತೀಚೆಗೆ ತಾಲೂಕಿನ ಸಮಸ್ಯೆ ಬಗ್ಗೆಯೇ ತಲೆಕೆಡಿಸಿಕೊಂಡಂತಿಲ್ಲ. ಹಾಗಿರುವಾಗ ತನ್ನ ಸುತ್ತಲ ಸಮಸ್ಯೆಗಳನ್ನು ಬಗೆಹರಿಸಿಕೊಂಡೀತೇ? ಹೌದು, ಇಲ್ಲಿನ ಅಧಿಕಾರಿ ವರ್ಗದವರ ಮೇಲೆ ಭ್ರಷ್ಟಾಚಾರದ ದೂರುಗಳು ಕೇಳಿಬರುತ್ತಿದ್ದು, ಈ ಅಧಿಕಾರಿಗಳು ಬರೀ ದುಡ್ಡು ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕ ಮಾತುಗಳು ಕೇಳಿಬರುತ್ತಿವೆ. ಹಾಗಿರುವಾಗ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನೈತಿಕ ಕೃತ್ಯಗಳ ಬಗ್ಗೆ ಗಮನ ಹರಿಸುವ ಗೋಜಿಗೆ ಹೋಗುತ್ತಿಲ್ಲ.

ಇದೇ ಕಾರಣಕ್ಕಾಗಿ ತಾಲೂಕು ಕಚೇರಿಯನ್ನು ಸ್ವಚ್ಛಗೊಳಿಸಲು, ಸುತ್ತಮುತ್ತ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ ವರ್ಗ ಮನಸ್ಸು ಮಾಡುತ್ತಿಲ್ಲ. ತಾಲೂಕು ಆಡಳಿತದ ಈ ಉದಾಸೀನ ಮನೋಭಾವ ಅನೈತಿಕ ಚಟುವಟಿಕೆ ನಡೆಸುವವರಿಗೆ ಬಹಳ ಅನುಕೂಲವಾಗಿದೆ.

ಗೇಟ್ ಇಲ್ಲ, ಸಿಸಿ ಕ್ಯಾಮರಾ ಅಂತೂ ಮೊದಲೇ ಇಲ್ಲ:
ತಾಲೂಕು ಕಚೇರಿಯ ಪ್ರಮುಖ ಗೇಟ್ ಶಿಥಿಲಗೊಂಡಿದೆ. ದಿನಂಪ್ರತಿ ನೂರಾರು ಜನರು ಕಚೇರಿ ಕೆಲಸಗಳಿಗೆ ಭೇಟಿ ನೀಡುತ್ತಾರೆ. ಆದರೆ ಈ ಶಕ್ತಿಕೇಂದ್ರಕ್ಕೆ ಸೂಕ್ತ ಭದ್ರತೆ ಇಲ್ಲ. ಕಚೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾಗಳಿಲ್ಲ. ತಡೆಗೋಡೆ ಇಲ್ಲ. ಇದು ಪುಂಡರು ರಾತ್ರಿ ಸುತ್ತಾಡಲು ಸಹಕಾರಿಯಾಗಿದೆ. ಕಚೇರಿಯ ಸುತ್ತಮುತ್ತ ಮದ್ಯದ ಬಾಟಲಿ, ಸಿಗರೇಟಿನ ಪ್ಯಾಕೆಟ್ ಗಳು ಕಂಡು ಬಂದಿದ್ದು ರಾತ್ರಿ ವೇಳೆ ಇಲ್ಲಿ ಪುಂಡರು ಬಂದು ಮದ್ಯಪಾನ ಮಾಡುತ್ತಾರೆ ಅಲ್ಲದೆ ಇದೊಂದು ಇಸ್ಪೀಟ್ ಅಡ್ಡೆಯಾಗಿ ಕೂಡಾ ಬದಲಾಗಿದೆ.

ಸರಿಯಾದ ಸ್ವಚ್ಛತೆ ಇಲ್ಲದೆ ಕಚೇರಿಯ ಮೇಲೂ ಗಿಡಗಂಟಿಗಳು ಬೆಳೆದು ನಿಂತಿವೆ. ಹುಲ್ಲುಗಾವಲಿನ ರೀತಿ ತಾಲೂಕು ಕಚೇರಿ ಕಾಣುತ್ತಿದೆ. ಇನ್ನಾದರೂ ಅಧಿಕಾರಿ ವರ್ಗ ಇತ್ತ ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
