Ad Widget .

ಮೌನ ಕ್ರಾಂತಿಯ ಹರಿಕಾರ ಶ್ರೀ.ಡಿ. ದೇವರಾಜ ಅರಸು

”ಪರೋಪಕಾರಯಾ ಪುಣ್ಯಾಯ ಪರಪೀಡನಾಯ ಪಾಪಾಯ ” ಎಂಬ ಮಾತಿಗೆ ಅನ್ವರ್ಥನಾಮವಾಗಿ ಕರ್ನಾಟಕ ರಾಜ್ಯವನ್ನಾಳಿದ ಧೀಮಂತ ಮುಖ್ಯಮಂತ್ರಿ ಶ್ರೀ. ಡಿ.ದೇವರಾಜ ಅರಸುರವರ.ಹಿಂದುಳಿದ ವರ್ಗಗಳ ನೇತಾರರಾಗಿ ಜನ ಮಾನಸದಲ್ಲಿ ಅಚ್ಚಳಿಯದಂತೆ ಉಳಿದಿರುವ ಜನನಾಯಕ ಅರಸರ ಜನ್ಮದಿನವನ್ನು ಇಂದು ಇಡೀ ರಾಜ್ಯದೆಲ್ಲೆಡೆ ಆಚರಿಸುತ್ತಿದ್ದೇವೆ.ದೇವರಾಜ ಅರಸು ಎಂಬ ಹೆಸರು ಹೆಮ್ಮರವಾಗಿ ಬೆಳೆಯಲು ಕಾರಣ ಅವರು ಮಾಡಿದ ನಿಸ್ವಾರ್ಥ ಸೇವೆಗಳ ಗಟ್ಟಿ ಬೇರು.ಕರ್ನಾಟಕ ರಾಜ್ಯ ಕಂಡ ಜನಮೆಚ್ಚಿದ ಮುಖ್ಯಮಂತ್ರಿಗಳಲ್ಲಿ ಅರಸರ ಸ್ಥಾನ ಅಗ್ರಗಣ್ಯ.
ಖ್ಯಾತ ರಾಜಕಾರಣಿ ದೇವರಾಜ ಅರಸರು ಆಗಸ್ಟ್ 20, 1915 ರಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದರು.ಇವರ ತಂದೆ ದೇವರಾಜ ಅರಸ್ ಹಾಗೂ ತಾಯಿ ದೇವಿರ ಅಮ್ಮಣ್ಣಿ.ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲಿ ಪಡೆದು, ಪ್ರೌಡ ಶಿಕ್ಷಣ ಹಾಗೂ ಪದವಿಯನ್ನು ಮೈಸೂರಿನಲ್ಲಿ ಪಡೆಯುತ್ತಾರೆ. ಶಿಕ್ಷಣದ ಬಳಿಕ ತಮ್ಮ ಹಳ್ಳಿಯಲ್ಲಿ ಕೃಷಿ ಜೀವನವನ್ನು ಆರಂಭಿಸುತ್ತಾರೆ. ಈ ರೀತಿಯಲ್ಲಿ ಜೀವನ ನಡೆಸುತ್ತಿದ್ದ ಅರಸರಿಗೆ ಸಾಹುಕಾರ ಚೆನ್ನಯ್ಯರ ಪರಿಚಯವಾಗಿ ಇವರ ಮೂಲಕ ಅರಸರಿಗೆ ರಾಜಕೀಯದ ಕಡೆ ಒಲವು ಮೂಡಿತು.
ಸಾಹುಕಾರ ಚೆನ್ನಯ್ಯರು ಅರಸರ ರಾಜಕೀಯ ಗುರುಗಳು.1941 ರಲ್ಲಿ ತಮ್ಮ 26ನೆ ವಯಸ್ಸಿನಲ್ಲಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ಚುನಾಯಿತರಾಗುತ್ತಾರೆ.ಇಲ್ಲಿಂದ ಅರಸರ ರಾಜಕೀಯ ಜೀವನದ ಹೆಬ್ಭಾಗಿಲು ವಿಶಾಲವಾಗಿ ತೆರೆದುಕೊಂಡಿತು.1945ರಲ್ಲೀ ಮತ್ತೊಮ್ಮೆ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾಗುತ್ತಾರೆ.1947ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸ್ವತಂತ್ರ ಹೋರಾಟಗಾರರಾಗುತ್ತರೆ. ಹುಣಸೂರು ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗುತ್ತಾರೆ. ಮುಂದೆ ಅರಸರು ರಾಜಕೀಯದಲ್ಲಿ ಯಾರೂ ಏರದ ಎತ್ತರಕ್ಕೆ ಏರಿದರು. ಜನಪರ ಕೆಲಸಗಳನ್ನು ಯಾರೂ ಊಹಿಸದ ರೀತಿಯಲ್ಲಿ ಮಾಡಿದರು. 1969 ರಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗಗೊಂಡಾಗ ಅರಸರು ಇಂದಿರಾಗಾಂಧಿ ಯವರ ವಲಯಕ್ಕೆ ಸೇರ್ಪಡೆಗೊಂಡರು. ಮುಂದೆ ಇಂದಿರಾಗಾಂಧಿಯವರಿಗೆ ತೀರ ಹತ್ತಿರವೂ ಆಗಿ ಬಿಟ್ಟರು. ನಂತರ ಮಾಡಿದ ಎಲ್ಲ ಕಾರ್ಯಗಳು ಇತಿಹಾಸ ಪುಟ ಸೇರತೊಡಗಿತು. ಅರಸರ ಆದೇಶಗಳನ್ನು ರಾಜಕಾರಣಿಗಳು,ಅಧಿಕಾರಿಗಳು ಮರು ಮಾತಿಲ್ಲದೆ ಜಾರಿಗೆ ತಂದರು.ಜನಪರ ಕಾರ್ಯಗಳಿಂದ ಎಲ್ಲ ವರ್ಗದ ಜನರು ಅರಸರನ್ನು ಇಷ್ಟ ಪಡುವಂತಾದರು. 1972ರಲ್ಲೀ ಇಂದಿರಾಗಾಂಧಿ ಯವರ ಕೃಪೆಯಿಂದ ಅರಸರು ರಾಜ್ಯದ ಮುಖ್ಯಮಂತ್ರಿಯಾದರು.1973 ನವೆಂಬರ್ 1 ರಂದು ಅರಸರು ಮೈಸೂರು ರಾಜ್ಯವನ್ನು “ಕರ್ನಾಟಕ” ಎಂದು ಮರು ನಾಮಕರಣ ಮಾಡಿದರು. ಬಳಿಕ ಬಡವರ ಪರವಾಗಿ ಕಂಡ ಕನಸುಗಳನ್ನು ಕಾರ್ಯ ರೂಪಕ್ಕೆ ತರಲಾರಂಭಿಸಿದರು.

Ad Widget . Ad Widget .

ಪರಿಶಿಷ್ಟ ಜಾತಿ,ವರ್ಗ ಮತ್ತು ಹಿಂದುಳಿದ ವರ್ಗಗಳ ಮೂಕ ಬಾಯಿಗೆ ರಾಜಕೀಯ ದನಿ ನೀಡಿದ್ದ ದೇವರಾಜ ಅರಸರು ನಿಜವಾದ ಗ್ರಾಮೀಣಾಭಿೃದ್ಧಿಯ ಹರಿಕಾರ. ಇವರು ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ಗ್ರಾಮೀಣ ಜನತೆಯಲ್ಲಿ ಜೀವನ್ನೋಲ್ಲಾಸ ಹೆಚ್ಚಿಸಲು ಶ್ರಮಿಸಿದರು. ಜೀವ ಸಂಕುಲಕ್ಕೆ ಚೈತನ್ಯವಾಗಿದ್ದ ಕಾಡು ಕಣ್ಣಮುಂದೆಯೇ ನಶಿಸಿ ಹೋಗುತ್ತಿರುವುದನ್ನು ಕಂಡು ಕೂಡಲೇ “ವೃಕ್ಷ ಸರಕ್ಷಣಾ ಕಾಯ್ದೆ” ಜಾರಿಗೆ ತಂದರು. ಶೋಷಣೆರಹಿತ ಸಮಾಜ ನಿರ್ಮಿಸುವುದು ಅರಸರ ಮೂಲ ಸೂತ್ರವಾಗಿತ್ತು. ರಾಜ್ಯದ ಲಕ್ಷಾಂತರ ಬಡ ರೈತರ ಭಾಗ್ಯದ ಬಾಗಿಲನ್ನು ತೆರೆಯುವ ಪ್ರಯತ್ನದಲ್ಲಿ ” ಉಳುವವನೇ ಹೊಲದೊಡೆಯ” ಎಂಬ ಕಾನೂನನ್ನು ನಿರ್ದಾಕ್ಷಿಣ್ಯವಾಗಿ ಜಾರಿಗೆ ತರುವ ಮೂಲಕ ಅರಸರು ಇತಿಹಾಸದ ಸ್ವರ್ಣ ಪುಟಗಳಲ್ಲಿ ಸೇರಿದರು. ರಾಜ್ಯದ ಸುಮಾರು ಅರವ್ತೈದು ಸಾವಿರಕ್ಕೂ ಹೆಚ್ಚು ಮಂದಿ ಜೀತದಾಳುಗಳಾಗಿ ಹೀನಸ್ಥಿತಿಯಲ್ಲಿ ಬದುಕುತ್ತಿದ್ದರು. ಅಂಥವರ ಪಾಲಿಗೆ ಅರಸರು ಸಂಜೀವಿನಿಯಾಗಿ ಅವರನ್ನು ಜೀತಮುಕ್ತಗೊಳಿಸಿದರು. ಇದರ ಜೊತೆ–ಜೊತೆಗೆ ಹಾವನೂರು ಆಯೋಗ,ಅಕ್ರಮ ಲೇವಾದೇವಿದಾರರನ್ನು ರದ್ದುಗೊಳಿಸುವುದು,ಬಾಡಿಗೆ ಮನೆಗಳ ಮೇಲೆ ನಿಯಂತ್ರಣ,ಕೃಷಿ ಕಾರ್ಮಿಕರ ಕೂಲಿಗೆ ಇಂತಿಷ್ಟು ಹಣ ನಿಗದಿ ಪಡಿಸುವುದು ಹೀಗೆ ಹತ್ತು ಹಲವಾರು ಜನಪರ ಕಾರ್ಯಗಳನ್ನು ಮಾಡಿದರು.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ಅರಸರು ಎಲ್ಲಾ ತಾಲೂಕುಗಳಲ್ಲಿ ವಿಧ್ಯಾರ್ಥಿ ನಿಲಯಗಳ ಸ್ಥಾಪನೆ ಮಾಡಿ ಇಂದಿನ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾಗಿದ್ದರೆ.ಅಂದು ಅವರು ಮಾಡಿದ ಈ ಯೋಜನೆ ಇಂದು ಅದೆಷ್ಟೋ ಹೆಣ್ಣುಮಕ್ಕಳ ಪಾಲಿಗೆ ಬೆಳಕಾಗಿದೆ. ಸುದೀರ್ಘ 40 ವರ್ಷಗಳ ರಾಜಕೀಯದ ಕೊನೆಯ ಘಟ್ಟದಲ್ಲಿ ಇಂದಿರಾಗಾಂಧಿ ಯವರೊಂದಿಗಿನ ಮನಸ್ತಾಪದಿಂದಾಗಿ ಅರಸರನ್ನು ಅವರು ರಾಜಕೀಯದಿಂದ ಕೈ ಬಿಟ್ಟರು. ಇದರಿಂದ ಧೃತಿ ಗೆಡದ ಅರಸರು ಹಿಂದುಳಿದ ಜನವರ್ಗಕ್ಕೆ ಜೀವವಾಹಿನಿಯಾದರು. ಎಲ್ಲಾ ಹಿಂದುಳಿದ ವರ್ಗದವರು ವಿಧಾನಸಭೆ ಪ್ರವೇಶಿಸಲು ಮುಕ್ತ ಅವಕಾಶ ನೀಡಿದರು.ಇದರಿಂದಾಗಿ ಅಧಿಕಾರವನ್ನು ಕಾಣದ ಜನರು ಇಂದು ಅದರ ರುಚಿ ಅನುಭವಿಸುವಂತಾಗಿದೆ.

Ad Widget . Ad Widget .

ಅಂತಿಮವಾಗಿ ಹೇಳುವದಾದರೆ ದೇವರಾಜ ಅರಸುರವರು ಒಬ್ಬ ಖ್ಯಾತ ರಾಜಕಾರಣಿಯೂ ಹೌದು,ಹಿಂದುಳಿದ ವರ್ಗಗಳ ನೇತಾರರು ಹೌದು.ಸತತ 8 ವರ್ಷಗಳ ಕಾಲ ರಾಜ್ಯದ ಮುಖ್ಯ ಜನರ ಹೃದಯದಲ್ಲಿ ಇಂದಿಗೂ ಮನೆ ಮತಾಗಿರುವುದು ಇವರ ಸಾಧನೆಯ ಮತ್ತೊಂದು ಪರ್ವವಾಗಿದೆ.ಅರಸರ ನಡೆ, ನುಡಿಗಳಿಂದ ಇಂದು ಕೂಡ ನಾವು ಅವರನ್ನು ಸ್ಮರಿಸುವಂತಾಗಿದೆ.ದೇವರಾಜ ಅರಸರು ಹಿಂದೆಯೂ ಅರಸರು,ಈಗಲೂ ಅರಸರು ಇನ್ನೂ ಮುಂದೆಯೂ ಅರಸರಾಗಿ ರಾರಾಜಿಸಲಿ…

✍️ಭವ್ಯ ಗೌಡ

Leave a Comment

Your email address will not be published. Required fields are marked *