ಸಮಗ್ರ ನ್ಯೂಸ್: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕೊಡಗಿಗೆ ಆಗಮಿಸಿದ್ದ ವೇಳೆ ಅವರ ಕಾರಿಗೆ ಸಂಘ ಪರಿವಾರದ ಕಾರ್ಯಕರ್ತರು ಮೊಟ್ಟೆ ಹೊಡೆದು ವಿರೋಧ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಚಾರವಾಗಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೊಡಗು ಜಿಲ್ಲಾ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ದ ಹರಿಹಾಯ್ದಿದ್ದಾರೆ.
ಕೊಡಗಿನ ಗುಡ್ಡೆಹೊಸೂರುವಿನಲ್ಲಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಎಸೆದಿದ್ದು, ಬಿಜೆಪಿಯ ಕೆಲ ಕಾರ್ಯಕರ್ತರನ್ನ ಕುಶಾಲನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದರೆ ಇದೇ ಪೊಲೀಸರ ವಿರುದ್ದ ಈಗ ಸಿದ್ದರಾಮಯ್ಯ ಕೆಂಡಾ ಮಂಡಲರಾಗಿದ್ದಾರೆ. ಪೊಲೀಸ್ ಭದ್ರತಾ ವೈಫಲ್ಯದ ಬಗ್ಗೆ, ಪೊಲೀಸರ ವಿರುದ್ದವೇ ಸಿದ್ದು ಗುಡುಗಿದ್ದು, ಅವರನ್ನು ಒದ್ದು ಒಳಗೆ ಹಾಕಲು ಆಗೋದಿಲ್ವಾ ನಿಮಗೆ. ಆರ್ಎಸ್ಎಸ್ ಗೂಂಡಗಳೊಂದಿಗೆ ಶಾಮೀಲಾಗಿದ್ದೀರಾ. ಪ್ರತಿಭಟನೆಗೆ ಬಿಟ್ಟು ತಮಾಷೆ ನೋಡ್ತೀರ ಎಂದು ಸಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಾವೇನು ಸುಮ್ಮನೆ ಕೂರುವುದಿಲ್ಲ, ಇಡೀ ರಾಜ್ಯಕ್ಕೆ ಬೆಂಕಿ ಹಚ್ತೀನಿ ಎಂಬ ಹೇಳಿಕೆ ನೀಡಿದ್ದಾರೆ. ಆಗಸ್ಟ್ 26 ರಂದು ಕೊಡಗು ಎಸ್ಪಿ ಕಚೇರಿ ಮುತ್ತಿಗೆಗೆ ಸಿದ್ದು ಕರೆ ನೀಡಿದ್ದು, ನಾನು ಆ ದಿನ ಮಡಿಕೇರಿಗೆ ಬರುವುದಾಗಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಗುರುವಾರ ಕೊಡಗಿಗೆ ಆಗಮಿಸಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಂಘ ಪರಿವಾರದ ಕಾರ್ಯಕರ್ತರಿಂದ ವಿವಿಧೆಡೆ ಪ್ರತಿರೋಧ ವ್ಯಕ್ತವಾಗಿತ್ತು. ಕೊಡಗಿನ ಗಡಿಭಾಗ ತಿತಿಮತಿ ಮೂಲಕ ಸಿದ್ದರಾಮಯ್ಯ ಪ್ರವೇಶಿಸುತ್ತಿದ್ದಂತೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ ಜೋಯಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಮುಖ್ಯರಸ್ತೆಯಲ್ಲಿ ಕಾರು ತೆರಳುತ್ತಿದ್ದಂತೆ ಕಾರ್ಯಕರ್ತನೊಬ್ಬ ತನ್ನ ಕೈಯಲ್ಲಿದ್ದ ವೀರ ಸಾವರ್ಕರ್ ಭಾವಚಿತ್ರ ಸಿದ್ದರಾಮಯ್ಯ ಮಡಿಲಲ್ಲಿ ಇಟ್ಟರು.
ಟಿಪ್ಪು ಭಕ್ತ ಸಿದ್ದರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದೆ. ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿರುವ ಹಿಂದು ವಿರೋಧಿ ಸಿದ್ದರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು.
ಮಡಿಕೇರಿಯ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಸಿದ್ದರಾಮಯ್ಯ ಇದ್ದ ಕಾರು ತೆರಳುತ್ತಿದ್ದಂತೆ ಸಂಘ ಪರಿವಾರದ ಕಾರ್ಯಕರ್ತರು ಮೊಟ್ಟೆ ಎಸೆಯಲಾರಂಭಿಸಿದರು. ಬಿಜೆಪಿ ಕಾರ್ಯಕರ್ತರು ಎಸೆದ ಮೊಟ್ಟೆವೊಂದು ಪತ್ರಿಕಾ ಛಾಯಾಗ್ರಾಹಕ ಲಕ್ಷ್ಮೀಶ್ ಅವರ ತಲೆಗೆ ಹೊಡೆಯಿತು.
ಮಡಿಕೇರಿಯಿಂದ ಕುಶಾಲನಗರದತ್ತ ತೆರಳುತ್ತಿದ್ದ ಸಿದ್ದರಾಮಯ್ಯ ಅವರಿದ್ದ ಕಾರಿಗೆ ಗುಡ್ಡೆಹೊಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಬದಿ ಸಂಚಾರಕ್ಕೂ ಅಡ್ಡಿ ಪಡಿಸಿದ್ದ ವೇಳೆ ಪೊಲೀಸರು- ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆಯಿತು.