ಮಂಗಳೂರು: ಸಾವರ್ಕರ್ ವಿವಾದದ ಬೆನ್ನಲ್ಲೇ ಬ್ಯಾನರ್ ನಲ್ಲಿ ಗೋಡ್ಸೆ ಪ್ರತ್ಯಕ್ಷ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸಾವರ್ಕರ್ ಬ್ಯಾನರ್ ವಿವಾದ ತೀವ್ರವಾಗಿರುವ ಸಂದರ್ಭದಲ್ಲಿ ಮಂಗಳೂರಿನಲ್ಲಿ ಮತ್ತೊಂದು ಬ್ಯಾನರ್ ವಿವಾದ ಪ್ರತಿಧ್ವನಿಸಿದೆ. ಅಖಿಲ ಭಾರತ ಹಿಂದೂ ಮಹಾಸಭಾ ಕೃಷ್ಣ ಜನ್ಮಾಷ್ಟಮಿಗೆ ನಾಡಿನ ಜನತೆಗೆ ಶುಭಾಶಯ ಕೋರುವ ನಿಟ್ಟಿನಲ್ಲಿ ಹಾಕಿದ ಬ್ಯಾನರ್ ಈಗ ವಿವಾದಕ್ಕೆ ಕಾರಣವಾಗಿದೆ.

Ad Widget .

ಬ್ಯಾನರ್‌ನಲ್ಲಿ ಸಾವರ್ಕರ್ ಫೋಟೋ ಜೊತೆಗೆ ನಾಥುರಾಮ್ ಗೋಡ್ಸೆಯ ಫೋಟೋ ಹಾಕಿರುವುದು ತೀವ್ರ ವಿವಾದವನ್ನು ಸೃಷ್ಟಿಸಿದೆ. ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೆಸರಿನಲ್ಲಿ ಬ್ಯಾನರ್ ಹಾಕಲಾಗಿದೆ.

Ad Widget . Ad Widget .

ಮಂಗಳೂರಿನ ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗದಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಶುಭಕೋರುವ ನೆಪದಲ್ಲಿ ಬ್ಯಾನರ್ ಹಾಕಲಾಗಿದೆ. ಈ ಬ್ಯಾನರ್‌ನಲ್ಲಿ ವಿನಾಯಕ ದಾಮೋದರ ಸಾವರ್ಕರ್ ಮತ್ತು ನಾಥುರಾಮ್ ಗೋಡ್ಸೆಯ ಫೋಟೋವನ್ನು ಹಾಕಲಾಗಿದೆ. ಅಲ್ಲದೇ ಬ್ಯಾನರ್‌ನಲ್ಲಿ “ರಾಜಕೀಯವನ್ನು ಹಿಂದುತ್ವಗೊಳಿಸಿ, ಹಿಂದೂಗಳನ್ನು ಸೈನಿಕೀಕರಣಗೊಳಿಸಿ” ಎಂಬ ಘೋಷ ವಾಕ್ಯವನ್ನು ನಮೂದಿಸಿದ್ದಾರೆ. ಬ್ಯಾನರ್‌ನಲ್ಲಿ ಹಿಂದೂ ಮಹಾಸಭಾದ ಪದಾಧಿಕಾರಿಗಳ ಫೋಟೋವನ್ನು ಕೂಡ ಹಾಕಲಾಗಿದೆ.

ಇದೀಗ ಈ ಬ್ಯಾನರ್‌ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಮಹಾತ್ಮ ಗಾಂಧೀಜೀ ಅವರನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯ ಫೋಟೋವನ್ನು ಹಾಕಿದ್ದು, ಉದ್ಧಟತನದ ಪರಮಾವಧಿ ಎನ್ನುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಕೂಡಲೇ ಈ ಬ್ಯಾನರ್ ಅನ್ನು ತೆರವುಗೊಳಿಸಿ. ಬ್ಯಾನರ್ ಹಾಕಿದ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ.

ಈ ಬ್ಯಾನರ್ ತೀವ್ರ ವಿವಾದ ಸೃಷ್ಠಿಸಿದ ಹಿನ್ನಲೆಯಲ್ಲಿ ಪೊಲೀಸರು, ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಥುರಾಮ್ ಗೋಡ್ಸೆಯ ಫೋಟೋ ಹಾಕಿರುವುದು ಮತ್ತಷ್ಟು ಸಂಘರ್ಷಕ್ಕೆ ಆಸ್ಪದ ನೀಡುವ ಹಿನ್ನೆಲೆಯಲ್ಲಿ ಬ್ಯಾನರ್ ತೆರವುಗೊಳಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾಗೆ ಸೂಚನೆ ನೀಡಿದ್ದಾರೆ.

Leave a Comment

Your email address will not be published. Required fields are marked *