ಸಮಗ್ರ ನ್ಯೂಸ್: ವಿದ್ಯಾಕಾಶಿಯೆಂದೇ ಹೆಸರು ವಾಸಿಯಾದ ಧಾರವಾಡದ ಜಯನಗರದಲ್ಲಿನ ವಿಶ್ವೇಶ್ವರಯ್ಯ ಪಿಯು ವಿಜ್ಞಾನ ಕಾಲೇಜಿನಲ್ಲಿ ನಡೆಯಬಾರದ ಘಟನೆ ನಡೆದುಹೋಗಿದೆ. ವಿದ್ಯಾರ್ಜನೆ ಮಾಡುವ ಜಾಗದಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಖುದ್ದು ಈ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷನ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು, ಅದಕ್ಕೆ ಪ್ರಿನ್ಸಿಪಾಲ್ ಸಾಥ್ ನೀಡುತ್ತಾರೆ ಅನ್ನೋ ಆರೋಪವೂ ಜೋರಾಗಿದೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಯಡವಣ್ಣವರ ಹಾಗೂ ಪ್ರಾಚಾರ್ಯ ಮಹದೇವ ಕುರವತ್ತಿಗೌಡರ ವಿರುದ್ಧ ದೂರು ದಾಖಲಾಗಿದೆ.


ವಿದ್ಯಾರ್ಥಿನಿಯನ್ನು ಕಾಲೇಜಿನ ಅಧ್ಯಕ್ಷ ಪುಸಲಾಯಿಸಿ ದಾಂಡೇಲಿಗೆ ಕರೆದುಕೊಂಡು ಹೋಗಿದ್ದನಂತೆ. ನಂತರ ಅಲ್ಲಿ ಜ್ಯೂಸ್ ಎಂದು ಹೇಳಿ ಬಿಯರ್ ಕುಡಿಸಿ ಆಕೆ ನಿದ್ದೆಗೆ ಜಾರಿದಾಗ ಶೋಷಣೆ ಮಾಡಿದ್ದಾನಂತೆ. ವಿದ್ಯಾರ್ಥಿನಿಯ ನೋವು ಕೇಳಬೇಕಾದ ಪ್ರಾಚಾರ್ಯನೇ ಅಧ್ಯಕ್ಷನಿಗೆ ಸಾಥ್ ಕೊಟ್ಟಿದ್ದಾನೆ. ಈತನೇ ಅಧ್ಯಕ್ಷರ ಜೊತೆ ವಿದ್ಯಾರ್ಥಿನಿಯರನ್ನು ಕಳುಹಿಸಿ ಕೊಡುತ್ತಿದ್ದ ಅನ್ನೋ ಆರೋಪವೂ ಕೇಳಿ ಬಂದಿದೆ.
ನೊಂದ ವಿದ್ಯಾರ್ಥಿನಿಯರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಸವರಾಜ ಯಡವಣ್ಣವರ ಹಾಗೂ ಪ್ರಾಚಾರ್ಯ ಮಹದೇವ ಕುರವತ್ತಿಗೌಡರ ವಿರುದ್ಧ ನೊಂದ ವಿದ್ಯಾರ್ಥಿನಿಯರು ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೇ ಸಂಸ್ಥೆಯ ಅಧ್ಯಕ್ಷ ಬಸವರಾಜ್ ಪರಾರಿಯಾಗಿದ್ದು, ಪ್ರಾಚಾರ್ಯ ಮಹದೇವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.