ಸಮಗ್ರ ನ್ಯೂಸ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮಸೀದಿಯೊಂದರ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದಾರೆ.
ಬಾಂಬ್ ಸ್ಫೋಟಗೊಂಡ ಪರಿಣಾಮ 21 ಜನರು ಮೃತಪಟ್ಟಿದ್ದಾರೆ. ಹಾಗೂ 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಖೈರ್ ಖಾನಾ ಪ್ರದೇಶದ ಮಸೀದಿಯಲ್ಲಿ ಜನರು ಮಗ್ರಿಬ್ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿದೆ. ಈ ಬಗ್ಗೆ ಅಫ್ಘಾನಿಸ್ತಾನದ ಭದ್ರತಾ ಇಲಾಖೆಯ ವಕ್ತಾರ ಖಾಲಿದ್ ಜದ್ರಾನ್ ಖಚಿತಪಡಿಸಿದ್ದಾರೆ. ಭದ್ರತಾ ಪಡೆಗಳು ಸ್ಥಳಕ್ಕೆ ತಲುಪಿದ್ದು, ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮಸೀದಿಯ ಇಮಾಮ್, ಮೌಲಾವಿ ಅಮೀರ್ ಮೊಹಮ್ಮದ್ ಕಾಬೂಲಿ ಕೂಡ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.
ಆಗಸ್ಟ್ 6ರಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಮಸೀದಿಯೊಂದರ ಬಳಿ ಕಾರ್ಟ್‌ನಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡು 8 ಜನರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದರು. ಈಗ ಮತ್ತೆ ಬಾಂಬ್ ಸ್ಫೋಟ ಸಂಭವಿಸಿದೆ.