ಸಮಗ್ರ ನ್ಯೂಸ್: ರಾಜ್ಯದ ಶಾಲೆಗಳಲ್ಲಿ ಖಾಲಿ ಇದ್ದ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಈ ಕುರಿತ ಪತ್ರಿಕಾ ಪ್ರಕಟಣೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಬಿಡುಗಡೆ ಮಾಡಿದ್ದು 2022ರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಮೇ 21 ಮತ್ತು 22ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ವೈಯಕ್ತಿಕ ಅಂಕಗಳನ್ನು ಇಂದು(ಆ.17) ಇಲಾಖಾ ವೆಬ್ ಸೈಟ್ www.schooleducation.kar.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.
ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳನ್ನು ಮತ್ತು ಮೀಸಲಾತಿ ವಿರಗಳನ್ನು ಹೊರತುಪಡಿಸಿ, ಆನ್ ಲೈನ್ ಅರ್ಜಿಯಲ್ಲಿ ವೈಯಕ್ತಿಕ ವಿವರಗಳಾದ ಅಭ್ಯರ್ಥಿಯ ಹೆಸರು, ತಂದೆ ಹೆಸರು, ತಾಯಿ ಹೆಸರು, ಜನ್ಮ ದಿನಾಂಕ, ಪದವಿ, ಬಿಇಡಿ, ಡಿಎಲ್ ಇಡಿ ಮತ್ತು ಸಿಟಿಇಟಿ ಮತ್ತು ಟಿಇಟಿ ಅಂಕಗಳಿಗೆ ಸಂಬಂಧಿಸಿದಂತೆ ಮಾತ್ರ ತಿದ್ದುಪಡಿಗೆ ಆ.18 ರಿಂದ 24 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ದಿನಾಂಕದ ನಂತರ ಯಾವುದೇ ಮನವಿಯನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದೆ.