ಸಮಗ್ರ ನ್ಯೂಸ್: ‘ಖಾಸಗಿ ಸಹಭಾಗಿತ್ವದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಮೀನಿನ ಖಾದ್ಯಗಳ ಹೊಟೇಲ್‍ಗಳನ್ನು ಆರಂಭಿಸಲಾಗುವುದು’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ (S. Angara) ಅವರು ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜ್ಯದ ಪ್ರಮುಖ ಜಲಾಶಯಗಳಾದ ಕೃಷ್ಣರಾಜಸಾಗರ(ಕೆಆರ್ ಎಸ್), ಆಲಮಟ್ಟಿ, ಲಿಂಗನಮಕ್ಕಿ, ಭದ್ರಾ ಸೇರಿದಂತೆ ರಾಜ್ಯದ ಹನ್ನೆರಡು ಜಲಾಶಯಗಳಲ್ಲಿಯೂ ಗರಿಷ್ಠ ಪ್ರಮಾಣದ ಮೀನು ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ರಾಜ್ಯದಲ್ಲಿ ಮತ್ಸ್ಯ ಕ್ರಾಂತಿ ನಡೆಯಲಿದ್ದು, ಇದಕ್ಕೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
‘ಮೀನುಗಾರಿಕಾ ಇಲಾಖೆಯಿಂದ ಬೆಂಗಳೂರು ಸೇರಿದಂತೆ ಕೆಲವು ರಾಜ್ಯದ ವಿವಿಧೆಡೆಗಳಲ್ಲಿ ಅಗ್ಗದ ದರದಲ್ಲಿ ಮೀನಿನ ಖಾದ್ಯಗಳ ಊಟದ ಹೊಟೇಲ್‍ಗಳನ್ನು ಸ್ಥಾಪಿಸಲಾಗಿದೆ. ಆದರೆ, ಅದನ್ನು ಮತ್ತಷ್ಟು ಜಿಲ್ಲೆಗಳಿಗೆ ವಿಸ್ತರಿಸಲು ಹಣಕಾಸಿನ ಲಭ್ಯತೆ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಇದೀಗ ಖಾಸಗಿ ಸಹಭಾಗಿತ್ವದಲ್ಲಿ ಆ ಯೋಜನೆ ಆರಂಭಿಸಲು ಉದ್ದೇಶಿಸಲಾಗಿದೆ. ಆರಂಭದಲ್ಲಿ ಬೆಂಗಳೂರು ನಗರದ 5 ಕಡೆಗಳಲ್ಲಿ ಇಲಾಖೆಯಿಂದ ಮೀನಿನ ಖಾದ್ಯಗಳ ಹೊಟೇಲ್ ಆರಂಭಿಸಲಾಗುವುದು’ ಎಂದು ಅಂಗಾರ ವಿವರಿಸಿದರು.