ಸಮಗ್ರ ನ್ಯೂಸ್: ಅಮುಲ್ ಹಾಲು ಪ್ರಿಯರಿಗೆ ಬ್ಯಾಡ್ ನ್ಯೂಸ್ ಇಲ್ಲಿದೆ. ದೇಶದ ಪ್ರಮುಖ ಹಾಲು ಹಾಗೂ ಹಾಲು ಉತ್ಪನ್ನ ಬ್ರ್ಯಾಂಡ್‌ಗಳಲ್ಲೊಂದಾದ ಅಮುಲ್ ಹಾಲಿನ ದರ ಹೆಚ್ಚಾಗಿದೆ. ಕಾರ್ಯಾಚರಣೆಯ ಒಟ್ಟಾರೆ ವೆಚ್ಚ ಮತ್ತು ಹಾಲಿನ ಉತ್ಪಾದನೆ ವೆಚ್ಚ ಹೆಚ್ಚಳದಿಂದ ಹಾಲಿನ ದರ ದುಬಾರಿಯಾಗುತ್ತಿದೆ ಹಾಗೂ ಕಳೆದ ವರ್ಷಕ್ಕೆ ಹೋಲಿಸಿದರೆ ಜಾನುವಾರು ಆಹಾರ ವೆಚ್ಚವೇ ಅಂದಾಜು ಶೇ. 20 ರಷ್ಟು ದುಬಾರಿಯಾಗಿದೆ ಎಂದೂ ಕಂಪನಿ ಹೇಳಿಕೊಂಡಿದೆ.
ಅಮುಲ್ ಹಾಲು ಮಾರಾಟವಾಗುವ ಗುಜರಾತ್, ದೆಹಲಿ – ಎನ್‌ಸಿಆರ್, ಪಶ್ಚಿಮ ಬಂಗಾಳ, ಮುಂಬೈ ಹಾಗೂ ದೇಶದ ಇತರೆ ಎಲ್ಲ ಮಾರುಕಟ್ಟೆಗಳಲ್ಲಿ ಹಾಲಿನ ದರ ನಾಳೆಯಿಂದಲೇ ಹೆಚ್ಚಾಗುತ್ತಿದೆ. ಇನ್ಪುಟ್ ವೆಚ್ಚದಲ್ಲಿ ಹೆಚ್ಚಳ ಹಿನ್ನೆಲೆ ನಮ್ಮ ಸದಸ್ಯ ಒಕ್ಕೂಟಗಳು ರೈತರಿಗೆ ನೀಡುವ ಹಾಲಿನ ದರವೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 8 – 9 ರಷ್ಟು ಹೆಚ್ಚಾಗಿದೆ ಎಂದೂ ಅಮುಲ್ ಮಾಹಿತಿ ನೀಡಿದೆ.
ಅಮುಲ್ ಹಾಲಿನ ಎಲ್ಲ ಬ್ರ್ಯಾಂಡ್‌ಗಳ ದರವೂ ನಾಳೆಯಿಂದ ಪ್ರತಿ ಲೀಟರ್‌ಗೆ 2 ರೂ. ಜಾಸ್ತಿಯಾಗಲಿದೆ. ಆಗಸ್ಟ್ 17 ಅಂದರೆ ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಅಮುಲ್ ಗೋಲ್ಡ್ ಹಾಲಿನ ದರ ಅರ್ಧ ಲೀಟರ್‌ಗೆ 31 ರೂ. ಗೆ ಮಾರಾಟವಾಗಲಿದ್ದರೆ, ಅಮುಲ್ ತಾಜಾ ಹಾಲು ಅರ್ಧ ಲೀಟರ್‌ಗೆ 25 ರೂ. ಹಾಗೂ ಅಮುಲ್ ಶಕ್ತಿ ಹಾಲು ಅರ್ಧ ಲೀಟರ್‌ಗೆ 28 ರೂ. ಗೆ ಮಾರಾಟವಾಗಲಿದೆ ಎಂದು ತಿಳಿದುಬಂದಿದೆ. ಲೀಟರ್‌ಗೆ 2 ರೂ. ದರ ಹೆಚ್ಚಳ ಅಮುಲ್ ಹಾಲಿನ ಎಂಆರ್‌ಪಿಯಲ್ಲಿ ಶೇ. 4 ರಷ್ಟು ತುಟ್ಟಿಯಾಗಲಿದೆ ಎನ್ನಲಾಗುತ್ತಿದೆ. ಆದರೂ, ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ ಎಂದೂ ಕಂಪನಿ ಹೇಳಿಕೊಂಡಿದೆ.