ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆಯು ಈ ಹಿಂದೆ ಘೋಷಿಸಿದ್ದ ಯೆಲ್ಲೋ ಅಲರ್ಟ್ ಶುಕ್ರವಾರ ಆರೆಂಜ್‌ಗೆ ಬದಲಾಗಿದೆ. ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಎರಡು ದಿನ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಮುದ್ರದಲ್ಲಿ ಗಾಳಿ ಬಲವಾಗಿ ಇರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ನೀಡಲಾಗಿರುವ ಎಚ್ಚರಿಕೆಯನ್ನು ಮುಂದುವರಿಸಲಾಗಿದೆ. ಗುರುವಾರ ಮಳೆ ಕಡಿಮೆಯಾಗಿದ್ದರೂ ಬಲವಾಗಿ ಬೀಸುವ ಗಾಳಿಯಿಂದಾಗಿ ಸಮುದ್ರದ ಪ್ರಕ್ಷುಬ್ಧತೆ ಮುಂದುವರಿಸಿದೆ.
ದ.ಕ.ಜಿಲ್ಲೆಯಲ್ಲಿ ಗುರುವಾರ ಸಾಧಾರಣ ಮಳೆಯೊಂದಿಗೆ ಬಿಸಿಲ ವಾತಾವರಣವಿತ್ತು. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಳೆಯಾಗಿದ್ದು, ಬಳಿಕ ಮೋಡದ ವಾತಾವರಣ ಸಹಿತ ಬಿಸಿಲು ಇತ್ತು. ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕಿನಲ್ಲಿಯೂ ಮಳೆಯಾಗಿದ್ದು, ಮೋಡ ಕವಿದ ವಾತಾವರಣವಿತ್ತು.
ಬೆಳ್ತಂಗಡಿ 49.3 ಮಿ.ಮೀ., ಬಂಟ್ವಾಳ 8.8, ಮಂಗಳೂರು 6.3, ಪುತ್ತೂರು 12.5, ಸುಳ್ಯ 12.3, ಮೂಡುಬಿದಿರೆ 24.3, ಕಡಬ 16.5 ಮಿ.ಮೀ. ಸಹಿತ ಜಿಲ್ಲೆಯ ಸರಾಸರಿ 23 ಮಿ.ಮೀ ಮಳೆಯಾಗಿದೆ.