ಸಮಗ್ರ ನ್ಯೂಸ್: ರಾಜ್ಯ ರಾಜಕೀಯದಲ್ಲಿ ಮತ್ತೆ ಸಿಎಂ ಬದಲಾವಣೆಯ ಸಣ್ಣದೊಂದು ಗುಸುಗುಸು ದೊಡ್ಡ ಸುದ್ದಿಯನ್ನೇ ಮಾಡ್ತಿದೆ. ಕಾಂಗ್ರೆಸ್ ನವ್ರು ಸಿಎಂ ಬದಲಾವಣೆ ಆಗ್ತಾರೆ ಎಂಬುದನ್ನು ಡಂಗುರ ಸಾರುತ್ತಿದ್ದರೆ, ಇತ್ತ ಬಿಜೆಪಿ ನಾಯಕರು ಸಿಎಂ ಬದಲಾವಣೆ ಇಲ್ಲ ಎಂದು ತೇಪೆ ಸಾರುತ್ತಿದ್ದಾರೆ. ಆದರೆ ಈ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಹೇಳಿರುವ ಆ ಮಾತು ರಾಜ್ಯ ಬಿಜೆಪಿ ಮತ್ತು ಅದರ ಹೈಕಮಾಂಡ್ ನಾಯಕರಿಗೆ ಮುಟ್ಟಿನೋಡಿಕೊಳ್ಳುವಂತೆ ಮಾಡಿದೆ.
ಮಂತ್ರಾಲಯದಲ್ಲಿ ಮಾತನಾಡಿದ ಯಡಿಯೂರಪ್ಪ ಚುನಾವಣೆ ಸಮಯದಲ್ಲಿ ಸಿಎಂ ಬದಲಾವಣೆ ಮಾತು ಕೇಳಿಬರ್ತಿದೆ, ಆದರೆ ಸಿಎಂ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಹೇಳ್ತಿದೆ. ಏನೇ ಆದರೂ ಆ.21ರಿಂದ ನಾನು ರಾಜ್ಯ ಪ್ರವಾಸ ಮಾಡ್ತೇನೆ. ಅಧಿಕಾರದಿಲ್ಲದಿದ್ದರೂ ಜನ ನನ್ನ ಇಷ್ಟ ಪಡ್ತಾರೆ’ ಎಂದಿದ್ದಾರೆ.
ಯಡಿಯೂರಪ್ಪ ಅವಧಿಯಲ್ಲಿ ರಾಜ್ಯ ಬಿಜೆಪಿ ವರ್ಚಸ್ಸು ಗಟ್ಟಿಯಾಗಿತ್ತು ಎಂಬುದು ಪಕ್ಷಾತೀತ ನಾಯಕರ ಅಭಿಪ್ರಾಯ. ಆದರೆ ಯಡಿಯೂರಪ್ಪರನ್ನು ವಯಸ್ಸಿನ ಹಿನ್ನಲೆಯಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಆದರೂ ಯಡಿಯೂರಪ್ಪ ಹೈಕಮಾಂಡ್ ಮೇಲೆ ಒತ್ತಡ ಹೇರಿ ತಮ್ಮ ಶಿಷ್ಯ ಬೊಮ್ಮಾಯಿಯವರನ್ನು ಸಿಎಂ ಮಾಡಿದ್ದರು.
ಆದರೆ ಈಗ ಯಡಿಯೂರಪ್ಪರಿಗೆ ಹೈಕಮಾಂಡ್ ಹಿಡಿತ ಕಡಿಮೆಯಾಗಿದ್ದು, ಸಿಎಂ ಬೊಮ್ಮಾಯಿಯವರನ್ನು ಕೆಳಗಿಳಿಸಬೇಡಿ ಎಂದು ಯಡಿಯೂರಪ್ಪ ಹೇಳಿದರೂ ಬಿಜೆಪಿ ಕೇಳುವ ಸ್ಥಿತಿಯಲ್ಲಿಲ್ಲ. ಈ ಹಿನ್ನಲೆಯಲ್ಲಿ ಯಡಿಯೂರಪ್ಪ ರಾಜ್ಯ ಪ್ರವಾಸದ ಮಾತುಗಳನ್ನು ಹೇಳಿರುವುದು ಬಿಜೆಪಿಗೆ ಶಾಕ್ ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಹಿತ ರಾಜ್ಯ ಬಿಜೆಪಿ ನಾಯಕರು ಏನೇ ಹೇಳಿದರೂ ಸಿಎಂ ಬದಲಾವಣೆ ಪಕ್ಕಾ ಎಂಬ ಮಾತುಗಳು ರಾಜ್ಯ ರಾಜಕೀಯದಲ್ಲಿ ಕೇಳಿ ಬರ್ತಾ ಇದೆ. ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದೂ ಇದೇ ಕಾರಣಕ್ಕೆ ಅಂತ ಹೇಳಲಾಗ್ತಿದೆ. ಆ.18ರ ಬಳಿಕ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.