ಸಮಗ್ರ ನ್ಯೂಸ್: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 515 ಅಂಶ ಏರಿಕೆ ಕಂಡು ಮತ್ತೆ 59 ಸಾವಿರದ ಮಟ್ಟವನ್ನು ದಾಟಿತು.
ವಿದೇಶಿ ಬಂಡವಾಳ ಒಳಹರಿವು ಮುಂದುವರಿದಿದೆ. ಇದರ ಜೊತೆಗೆ ಹೂಡಿಕೆದಾರರು ಐ.ಟಿ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿರುವುದು ಸೂಚ್ಯಂಕದ ಏರಿಕೆಗೆ ಕಾರಣವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 124 ಅಂಶ ಹೆಚ್ಚಾಗಿ 17,659 ಅಂಶಗಳಿಗೆ ತಲುಪಿತು.
ಸೆನ್ಸೆಕ್ಸ್‌ನಲ್ಲಿ ಎಕ್ಸಿಸ್ ಬ್ಯಾಂಕ್ ಷೇರು ಶೇ 2.75ರಷ್ಟು ಗರಿಷ್ಠ ಏರಿಕೆ ಕಂಡಿತು. ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ, ಟೆಕ್ ಮಹೀಂದ್ರ, ವಿಪ್ರೊ, ಎಸ್‌ಬಿಐ, ಟಿಸಿಎಸ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಷೇರುಗಳ ಮೌಲ್ಯವೂ ಹೆಚ್ಚಾಯಿತು. ಇನ್ನೊಂದೆಡೆ, ಐಟಿಸಿ, ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್, ಎಚ್‌ಯುಎಲ್, ಮಾರುತಿ ಮತ್ತು ನೆಸ್ಲೆ ಇಂಡಿಯಾ ಷೇರುಗಳು ಶೇ 1.56ರವರೆಗೆ ಇಳಿಕೆ ಕಂಡವು.