ಸಮಗ್ರ ನ್ಯೂಸ್: ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ ವಿದ್ಯಾರ್ಥಿನಿ ನೀರುಪಾಲಾದ ಘಟನೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ಸಂಭವಿಸಿದೆ.
ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ 7ವರ್ಷ ನೀರು ಪಾಲಾಗಿರುವ ವಿದ್ಯಾರ್ಥಿ. ಸ.ಹಿ.ಪ್ರಾ ಶಾಲೆ ಚಪ್ಪರಿಕೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ಸನ್ನಿಧಿ ಸೋಮವಾರ ಸಂಜೆ ಶಾಲೆಬಿಟ್ಟು ಮನೆಗೆ ಬರುವಾಗ ಬೀಜಮಕ್ಕಿ ಎಂಬಲ್ಲಿ ಕಾಲು ಸಂಕವಿದ್ದು ಈ ಕಾಲು ಸಂಕ ದಾಟುವಾಗ ಮಗು ಆಯತಪ್ಪಿ ಹಳ್ಳಕ್ಕೆ ಬಿದ್ದಿದ್ದಾಳೆ ಎನ್ನಲಾಗಿದೆ. ಕೂಡಲೇ ವಿಷಯ ತಿಳಿದು ಸಾರ್ವಜನಿಕರು ಹುಡುಕಾಟ ಆರಂಭಿಸಿದ್ದು, ಬುಧವಾರ(ಆ10) ಆಕೆಯ ಶವ ಪತ್ತೆಯಾಗಿದೆ. ಈ ದುರಂತದ ಬಳಿಕ ಹಲವೆಡೆ ಅಪಾಯಕಾರಿ ಕಾಲುಸಂಕದ ಕುರಿತು ಸುದ್ದಿಗಳು ಓಡಾಡುತ್ತಿವೆ.
ಸುಳ್ಯದಲ್ಲೂ ಇದೇ ರೀತಿಯ ತೂಗುಪಾಲ:
ಸುಳ್ಯ ತಾಲೂಕಿನ ಮರ್ಕಂಜ ಮತ್ತು ಅರಂತೋಡು ಗ್ರಾಮದ ನಡುವಿನ ಅರಮನೆಗಯದಲ್ಲಿ, ಬಾಳುಗೋಡು ಗ್ರಾಮದ ಉಪ್ಪುಕಳ ಎಂಬಲ್ಲಿ ಮತ್ತು ಆಲೆಟ್ಟಿ ಗ್ರಾಮದ ಬಟ್ಟಂಗಾಯ ಎಂಬಲ್ಲಿ ಕೂಡ ಇದೇ ರೀತಿಯ ಅಪಾಯಕಾರಿ ಕಾಲುಸಂಕಗಳಿವೆ.
ಇಲ್ಲಿ ಕೂಡ ಆಯಾ ಗ್ರಾಮದ ಜನರು ತಮ್ಮ ದಿನನಿತ್ಯದ ಕಾರ್ಯಗಳಿಗೆ, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸಂಕದಲ್ಲಿ ಸಂಚರಿಸುವ ದುಸ್ಥಿತಿ ಇದೆ. ಆದರೇ ಈ ಸಂಕಗಳನ್ನು ಮರದಿಂದ ಮಾಡಿರುವುದರಿಂದ ಅದು ಯಾವ ಸಮಯದಲ್ಲಿ ಮುರಿದು ಹೋಗ ಬಹುದು ಎಂದು ಹೇಳಲು ಸಾಧ್ಯವಿಲ್ಲ. ಈ ಎಲ್ಲಾ ಸಮಸ್ಯೆಯನ್ನು ಎದುರಿಸಿಕೊಂಡು ಜನರು ಸಂಚರಿಸಬೇಕು.
ಆದರೆ ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಲ್ಲಿ, ಜನಪ್ರತಿನಿಧಿಗಳಲ್ಲಿ ಹಲವು ಭಾರೀ ಉತ್ತಮ ಗುಣಮಟ್ಟದ ಸಂಕ ನಿರ್ಮಿಸಿ ಕೊಡಲು ಬೇಡಿಕೆ ಇಟ್ಟರೂ ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ.
ಇಂತಹ ಕಾಲು ಸಂಕಗಳಲ್ಲಿ ಸಂಚರಿಸಿ ಜೀವಕ್ಕೆ ಅಪಾಯ ಬಂದರೆ ಯಾರು ಹೊಣೆ? ಹಾಗಾಗಿ ಬೈಂದೂರಿನಲ್ಲಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸುಳ್ಯ ತಾಲೂಕಿನಲ್ಲಿಯೂ ಸಂಕದ ಸಮಸ್ಯೆಯನ್ನು ಸರಿಪಡಿಸಲು ಆಡಳಿತ ಕೃಪೆ ತೋರಬೇಕಿದೆ.