ಸಮಗ್ರ ನ್ಯೂಸ್: ಆಧುನಿಕ ಜಗತ್ತಿನಲ್ಲಿ ‘ನಾಸಾ’ ಮಾದರಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಅಂತರಿಕ್ಷದಲ್ಲಿ ಹೊಸ ಸಂಶೋಧನೆಗಳನ್ನು ನಡೆಸಿವೆ. ಈಗ ಹೊಸತೊಂದು ಶೋಧವಾಗಿದೆ.
ಬಲುದೂರದ ಅಂತರಿಕ್ಷದಿಂದ ಮಾನವನ ಹೃದಯದ ಬಡಿತವನ್ನು ಹೋಲುವ ರೇಡಿಯೊ ಸಂದೇಶವೊಂದು ಭೂಮಿಯನ್ನು ತಲುಪಿದೆ! ಇದುವರೆಗೂ ಇಂತಹ ಅನೇಕ ರೇಡಿಯೊ ಸಂದೇಶಗಳು ನಮಗೆ ಸಿಕ್ಕಿವೆ. ಆದರೆ, ಈಗ ಸಿಕ್ಕಿರುವುದು ಕೊಂಚ ವಿಶೇಷವಾಗಿದೆ. ಹಾಗಾಗಿಯೇ, ಇದು ಸಂಚಲನ ಮೂಡಿಸಿದೆ.
ಅಮೆರಿಕದ ಮಷಾಸುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ವಿಶ್ವದ ಹಲವು ಪ್ರಮುಖ ಬಾಹ್ಯಾಕಾಶ ವಿಜ್ಞಾನಿಗಳ ಸೇರಿ ಈ ಸಂಶೋಧನೆಯನ್ನು ನಡೆಸಿದ್ದಾರೆ. ಈ ಬಗೆಯ ರೇಡಿಯೊ ಸಂದೇಶಗಳನ್ನು ‘ಫಾಸ್ಟ್ ರೇಡಿಯೊ ಬರ್ಸ್ಟ್’ (ಎಫ್‌ಆರ್‌ಬಿ) ಎನ್ನುತ್ತಾರೆ. ಈವರೆಗೆ ಸಿಕ್ಕಿರುವ ರೇಡಿಯೊ ಸಂದೇಶಗಳಿಗಿಂತ ಇದು ಬಹುಪಾಲು ಒಂದು ಸಾವಿರ ಪಟ್ಟು ಹೆಚ್ಚು ಬಲಶಾಲಿಯಾಗಿದೆ. 0.2 ಸೆಕೆಂಡ್‌ಗಳ ಅಂತರದಲ್ಲಿ ಈ ರೇಡಿಯೊ ಸಂದೇಶ ಪ್ರಸಾರವಾಗುತ್ತಿದ್ದು, ಮಾನವನ ಹೃದಯದ ಬಡಿತವನ್ನೇ ಹೋಲುವಂತಿರುವುದು ಕುತೂಹಲ ಕೆರಳಿಸಲು ಕಾರಣವಾಗಿದೆ.
ಇದು ಮೊದಲನೇ ಬಾರಿ ಸಿಕ್ಕಿರುವ ರೇಡಿಯೋ ಸಂದೇಶವೇನಲ್ಲ. ಈ ಹಿಂದೆಯೂ ರೇಡಿಯೊ ಸಂದೇಶಗಳು ನಮಗೆ ದೊರೆತಿವೆ. ರೇಡಿಯೊ ಸಂದೇಶಗಳೆಂದರೆ ಅವನ್ನು ಬುದ್ಧಿಮತ್ತೆ ಇರುವ ಜೀವಿಗಳೇ ಸೃಷ್ಟಿಸಬೇಕು ಎಂದೇನಿಲ್ಲ. ಬಲುದೂರದ ಗ್ಯಾಲಕ್ಸಿ(ನಕ್ಷತ್ರಪುಂಜ)ಗಳಲ್ಲಿ ಇರುವ ‘ನ್ಯೂಟ್ರಾನ್ ಸ್ಟಾರ್’ಗಳಿಂದ ಈ ಬಗೆಯ ರೇಡಿಯೊ ಸಂದೇಶಗಳು ಹೊರಹೊಮ್ಮುತ್ತವೆ. ಇವನ್ನು ರೇಡಿಯೊ ಪಲ್ಸಾರ್ ಹಾಗೂ ಮ್ಯಾಗ್ನೆಟಾರ್ ಎಂದು ಕರೆಯಲಾಗುತ್ತದೆ.
ಅತಿ ದೊಡ್ಡ ಗಾತ್ರವನ್ನು ಹೊಂದಿರುವ ನಕ್ಷತ್ರಗಳಲ್ಲಿನ ಜಲಜನಕವೆಲ್ಲಾ ಮುಗಿದ ಮೇಲೆ ಆ ನಕ್ಷತ್ರದ ಆಯಸ್ಸು ಬಹುತೇಕ ಮುಗಿದಂತೆಯೇ. ಆಗ ಅದರ ಗುರುತ್ವಬಲ ಹೆಚ್ಚಾಗಿ ಅದರ ತಿರುಳು ತನಗೆ ತಾನೇ ಕುಸಿಯಲು ಆರಂಭವಾಗುತ್ತದೆ. ಅದರ ಗಾತ್ರ ಕುಗ್ಗುತ್ತಾ ಸಾಂದ್ರತೆ ಹೆಚ್ಚಲು ಶುರುವಾಗುತ್ತದೆ. ಆ ಹಂತದ ನಕ್ಷತ್ರವನ್ನು ‘ನ್ಯೂಟ್ರಾನ್ ಸ್ಟಾರ್’ ಎನ್ನಲಾಗುತ್ತದೆ. ಈ ‘ನ್ಯೂಟ್ರಾನ್ ಸ್ಟಾರ್’ಗಳ ಪರಿಭ್ರಮಣೆಯ ವೇಗವೂ ಹೆಚ್ಚು. ಈ ನಕ್ಷತ್ರದ ಅಧಿಕ ಸಾಂದ್ರತೆ ಹಾಗೂ ಪರಿಭ್ರಮಣೆಯ ಫಲವಾಗಿ ಅತಿ ಪ್ರಬಲವಾದ ರೇಡಿಯೊ ಸಂದೇಶಗಳು ಹೊರಹೊಮ್ಮುತ್ತವೆ. ಅದೇ ಈಗ ನಮಗೆ ಸಿಕ್ಕಿರುವ ರೇಡಿಯೊ ಸಂದೇಶ.