ಸಮಗ್ರ ನ್ಯೂಸ್: ಕಾಲೇಜು ಕ್ಯಾಂಪಸ್‌ನಲ್ಲಿ ‘ಭಾರತ್ ಮಾತಾ ಪೂಜನಾ’ ಕಾರ್ಯಕ್ರಮ ನಡೆಸಲು ಮುಂದಾದ ಮಂಗಳೂರು ವಿವಿ ಕಾಲೇಜು ವಿದ್ಯಾರ್ಥಿ ಸಂಘದ ನಡೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ಕಾರ್ಯಕ್ರಮದ ವಿರುದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಕಾರ್ಯಕ್ರಮ ರದ್ದು ಪಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರರಿಗೆ ಮನವಿ ಮಾಡಿದೆ. ಭಾರತ ಮಾತೆ ಕೇಸರಿ ಧ್ವಜ ಹಿಡಿದ ಫೋಟೋ ಬಳಸಿದ್ದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿರುವ ಕ್ಯಾಂಪಸ್ ಫ್ರಂಟ್, ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ‘ಭಾರತ ಮಾತಾ ಪೂಜನಾ’ ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.
ವಿವಿ ಕಾಲೇಜು ಕಾರ್ಯಕ್ರಮದ ಪೋಸ್ಟರ್‌ನಲ್ಲಿ ಭಾರತ ಮಾತೆ ಕೇಸರಿ ಧ್ವಜ ಹಿಡಿದ ಚಿತ್ರವಿದ್ದು, ಅಗಸ್ಟ್ 11ರಂದು ಕಾಲೇಜಿನ ವಿದ್ಯಾರ್ಥಿ ಸಂಘದಿಂದ ಭಾರತ ಮಾತಾ ಪೂಜನಾ ಕಾರ್ಯಕ್ರಮ ಅಯೋಜನೆ ಮಾಡಲಾಗಿದೆ. ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಆಯೋಜಿಸಿದ್ದು, ವಿದ್ಯಾರ್ಥಿಗಳ ಮಧ್ಯೆ ಬಿರುಕು ಮೂಡಿಸುವ ಕಾರ್ಯಕ್ರಮ ರದ್ದುಪಡಿಸುವಂತೆ ಆಗ್ರಹ ವ್ಯಕ್ತವಾಗಿದೆ. ಭಾರತ ಮಾತೆಯ ಕೈಯ್ಯಲ್ಲಿ ರಾಷ್ಟ್ರಧ್ವಜದ ಬದಲು ಭಗವಾಧ್ವಜ ಹಿಡಿದಿರುವ ಚಿತ್ರ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಮಂಗಳೂರು ವಿವಿ ಕಾಲೇಜಿನಲ್ಲಿ ‘ಭಾರತ್ ಮಾತಾ ಪೂಜನ’ ಕಾರ್ಯಕ್ರಮ ವಿವಾದ ವಿಚಾರ ಸಂಬಂಧಿಸಿ ಡಿಸಿಗೆ ಮನವಿ ಬಳಿಕ ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷ ತಾಜುದ್ದೀನ್ ಹೇಳಿಕೆ ನೀಡಿದ್ದಾರೆ. ಭಾರತ ಮಾತೆಯ ಹೆಸರಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಇದು. ಭಾರತ ಮಾತೆಯ ಕೈಯ್ಯಲ್ಲಿ ತ್ರಿವರ್ಣ ಧ್ವಜದ ಬದಲು ಕೇಸರಿ ಧ್ವಜ ಕೊಟ್ಟಿದ್ದಾರೆ. ಭಾರತದ ಭೂಪಟವನ್ನು ಕೂಡ ಬೇರೆ ರೀತಿಯಲ್ಲಿ ಪೋಸ್ಟರ್ ನಲ್ಲಿ ತೋರಿಸಿದ್ದಾರೆ ಎಂದಿದ್ದಾರೆ.