ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು, ಫಾಜಿಲ್ ಹತ್ಯೆಯಿಂದ ಪ್ರಕ್ಷುಬ್ದವಾಗಿದ್ದ ಮಂಗಳೂರು ಸದ್ಯ ಸಹಜ ಸ್ಥಿತಿಯತ್ತ ಮರಳುತ್ತಿದೆ. ಈ ನಡುವಲ್ಲೇ ಮಂಗಳೂರಲ್ಲಿ ಮತ್ತೋರ್ವ ಹಿಂದೂ ಮುಖಂಡನ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಅನ್ನೋ ಮಾಹಿತಿ ಬಯಲಾಗಿದೆ. ಈ ಕುರಿತು ಹಿಂದೂ ಮುಖಂಡ ಪೊಲೀಸರಿಗೆ ದೂರು ನೀಡಿದ್ದಾರೆ.
ಅಗಸ್ಟ್ 2 ರಂದು 5 ರಂದು ರಾತ್ರಿಯ ಮನೆಗೆ ಬರುತ್ತಿದ್ದ ವೇಳೆಯಲ್ಲಿ ಮಂಗಳೂರು ನಗರದ ಬಜ್ಜೋಡಿ- ಬಿಕರ್ನಕಟ್ಟೆ ರಸ್ತೆಯಲ್ಲಿ ನನ್ನ ಕಾರನ್ನು ದ್ವಿಚಕ್ರವಾಹನದಲ್ಲಿ ಬಂದಿದ್ದ ಅಪರಿಚಿತರು ಹಿಂಬಾಲಿಸುತ್ತಿದ್ದಾರೆ. ಅಲ್ಲದೇ ಅಗಸ್ಟ್7 ರಂದು ರಾತ್ರಿ ಸುಮಾರು 10.30 ರ ಸುಮಾರಿಗೆ ಪಂಪ್‌ವೆಲ್ ನಿಂದ ಮನೆಗೆ ಹೊರಟಿದ್ದು ಬಜ್ಜೋಡಿ ಬಿಕರ್ನಕಟ್ಟೆ ರಸ್ತೆಯಲ್ಲಿ ಅಪಾರ್ಟ್‌ಮೆಂಟ್ ಕಡೆಗೆ ಕಾರನ್ನು ತಿರುಗಿಸುವಷ್ಟರಲ್ಲಿ ಎದುರುಗಡೆಯಿಂದ ಹಲ್ಮೆಟ್ ಧರಿಸಿಕೊಂಡು ಬಂದ ಬೈಕ್ ಸವಾರರು ಬೈಕ್‌ನ್ನು ತನ್ನ ಕಾರಿಗೆ ತಾಗಿಸಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ ರಾತ್ರಿ 11 ಗಂಟೆ 43 ನಿಮಿಷಕ್ಕೆ ಇಂಟರ್‌ನೆಟ್ ಕರೆ ಮಾಡಿರುವ ವ್ಯಕ್ತಿ ತುಳು ಮಿಶ್ರಿತ ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಾ ಬೆದರಿಕೆಯೊಡ್ಡಿದ್ದಾನೆ. ಈ ದಿನ ತಪ್ಪಿಸಿದ್ದಿ ಎಂದು ಖುಷಿ ಪಡಬೇಡ, ಗೊತ್ತಿದೆ, ಇನ್ನೂ ಮೂರು ಜನ ಪಂಪುವೆಲ್ ನಲ್ಲಿ ಇದ್ದಾರೆ, ನಾನು ಬಿಡುವುದಿಲ್ಲ, ಕೊಂದ ನೋವು ಇದೆ ಎಂದು ಬೆದರಿಕೆಯೊಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲು ಸಾಲು ಹತ್ಯೆಯಿಂದ ತತ್ತರಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೇರಲಾಗಿದ್ದ ನೈಟ್ ಕರ್ಪ್ಯೂ ತೆರವು ಮಾಡಲಾಗಿದೆ. ಆದರೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ. ಇದೀಗ ಹಿಂದೂ ಕಾರ್ಯಕರ್ತ ನೀಡಿರುವ ದೂರನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಪೊಲೀಸರು ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಂಡಿದ್ದು, ನಗರ ಪೊಲೀಸ್ ಆಯುಕ್ತರಾಗಿರುವ ಎನ್. ಶಶಿಕುಮಾರ್ ಅವರು ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.