ಸಮಗ್ರ ನ್ಯೂಸ್: ಬೈಂದೂರಿನಲ್ಲಿ ಚಾಕಲೇಟ್ ನುಂಗಿ ಬಾಲಕಿ ಸಾವನ್ನಪ್ಪಿದ್ದಾಳೆನ್ನಲಾದ ಪ್ರಕರಣದ ವೈದ್ಯಕೀಯ ವರದಿ ಇದೀಗ ಬಂದಿದ್ದು, ಇದರಲ್ಲಿ ಆಕೆಯ ಸಾವಿಗೆ ಚಾಕಲೇಟ್ ನುಂಗಿರುವುದು ಕಾರಣವಲ್ಲ, ಬದಲಾಗಿ ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಉಪ್ಪುಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಬೈಂದೂರು ಬಿಜೂರು ಗ್ರಾಮದ ಸುಪ್ರೀತಾ ಪೂಜಾರಿ ಅವರ ಪುತ್ರಿ ಸಮನ್ವಿ (6)ಮೃತ ಬಾಲಕಿ. ಈಕೆ ಜುಲೈ 20ರ ಬೆಳಗ್ಗೆ ಶಾಲೆಗೆ ಹೋಗಲು ನಿರಾಕರಿಸಿದ್ದಕ್ಕೆ ತಾಯಿ ಚಾಕಲೇಟ್ ನೀಡಿ ಶಾಲೆಗೆ ಹೋಗುವಂತೆ ಪ್ರೇರೇಪಿಸಿದ್ದರು. ಚಾಕಲೇಟ್ ಬಾಲಕಿಯ ಬಾಯಲ್ಲಿರುವಾಗಲೇ ಶಾಲಾ ಬಸ್ ಬಂದ ಕಾರಣ ತಾಯಿ ಆಕೆಯನ್ನು ಬಸ್ ಇದ್ದಲ್ಲಿಗೆ ಎತ್ತಿಕೊಂಡು ಬಂದಿದ್ದಾರೆ. ಈ ವೇಳೆ ಬಾಲಕಿ ಏಕಾಏಕಿ ಕುಸಿದು ಬಿದ್ದಿದ್ದಳು. ಇದರಿಂದ ಆತಂಕಗೊಂಡ ಮನೆಯವರು ಕೂಡಲೇ ಆಕೆಯನ್ನು ಬೈಂದೂರಿನ ಬೈಂದೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಆಕೆ ಸಾವನ್ನಪ್ಪಿರುವುದು ಗೊತ್ತಾಯಿತು.
ಬಾಲಕಿ ಚಾಕಲೇಟ್ ನುಂಗಿ ಸಾವನ್ನಪ್ಪಿದ್ದಾಳೆಂದೇ ಶಂಕಿಸಲಾಗಿತ್ತು. ಆದರೆ ಬಳಿಕ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿ ಎಫ್‌ಎಸ್‌ಎಲ್ ವರದಿಗಾಗಿ ಕಳುಹಿಸಲಾಗಿತ್ತು. ಇದೀಗ ಎಫ್‌ಎಸ್‌ಎಲ್ ವರದಿ ಬಂದಿದ್ದು, ಆಕೆಯ ಸಾವಿಗೆ ಚಾಕಲೇಟ್ ನುಂಗಿರುವುದು ಕಾರಣವಲ್ಲ. ಬದಲಾಗಿ ಆಕೆಗೆ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆ ಇತ್ತು. ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.