ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರುವಿನಲ್ಲಿ ನಡೆದಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಕುರಿತಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪೋಟಕ ಮಾಹಿತಿ ನೀಡಿದ್ದಾರೆ.
ಈವರೆಗೆ ಕೇರಳದಿಂದ ಬಂದ ಹಂತಕರು ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಿದ್ದು, ಅವರಿಗೆ ಸ್ಥಳೀಯರು ಸಹಾಯ ಮಾಡಿದ್ದಾರೆ ಎಂದು ಭಾವಿಸಲಾಗಿತ್ತಾದರೂ ಆದರೆ ಹತ್ಯೆ ಮಾಡಿದ್ದು ಸ್ಥಳೀಯರೇ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಕನ್ನಡದ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅರಗ ಜ್ಞಾನೇಂದ್ರ ಈ ವಿಷಯ ತಿಳಿಸಿದ್ದು, ಶೀಘ್ರದಲ್ಲೇ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.
ನೆಟ್ಟಾರುವಿನಲ್ಲಿ ಪ್ರವೀಣ್ ಹತ್ಯೆಯಾದ ಬಳಿಕ, ಬೆಳ್ಳಾರೆಯಲ್ಲಿ ಬಂದ್ ಮಾಡಿ ಹಿಂದೂ ಸಂಘಟನೆಯ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಅನೇಕ ಕಾರ್ಯಕರ್ತರು ಬಿಜೆಪಿ ಸ್ಥಳೀಯ ಸಂಘಟನೆಗಳಿಗೆ ರಾಜೀನಾಮೆ ಕೂಡ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಇಂದು ಸ್ಪೋಟಕ ಮಾಹಿತಿಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಬಿಚ್ಚಿಟ್ಟಿದ್ದಾರೆ.