ಸಮಗ್ರ ನ್ಯೂಸ್: ನವೆಂಬರ್ 1ಕ್ಕೆ ಪುನೀತ್ ರಾಜ್ ಕುಮಾರ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುವುದಾಗಿ ಘೋಷಣೆ ಮಾಡಲಾಗಿದೆ.
ನಟ ಪುನೀತ್ ರಾಜ್ ಕುಮಾರ್ ನಿಧನದ ನಂತರ ಕರ್ನಾಟಕ ಸರಕಾರವು ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಿತ್ತು. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿರಲಿಲ್ಲ. ತಮ್ಮ ನೆಚ್ಚಿನ ನಟನಿಗೆ ಈ ಅತ್ಯುನ್ನತ ಪ್ರಶಸ್ತಿಯನ್ನು ಯಾವಾಗ ಪ್ರದಾನ ಮಾಡಲಾಗುತ್ತದೆ ಎಂದು ಅಭಿಮಾನಿಗಳು ಕಾದಿದ್ದರು. ಕೊನೆಗೂ ಆ ದಿನಾಂಕ ಘೋಷಣೆಯಾಗಿದೆ. ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆದ ಫಲ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಅಪ್ಪುಗೆ ಘೋಷಣೆ ಮಾಡಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಇಡೀ ಕುಟುಂಬ ಹಾಜರಿತ್ತು.
ಇಂದು ಉದ್ಘಾಟನೆಗೊಂಡ ಫಲ ಪುಷ್ಪ ಪ್ರದರ್ಶನದಲ್ಲಿ ಡಾ.ರಾಜ್ ಕುಮಾರ್ ಮತ್ತು ಅಪ್ಪು ನೆನಪಿನಲ್ಲಿ ವಿಶೇಷ ಪ್ರದರ್ಶನ ಆಯೋಜನೆಗೊಂಡಿದೆ. ಪುನೀತ್ ಮತ್ತು ಡಾ.ರಾಜ್ ಪುತ್ಥಳಿಗಳನ್ನು ಲಾಲ್ ಬಾಗ್ ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಮೂಲಕ ಮೇರು ನಟರಿಗೆ ಸರಕಾರವು ಗೌರವ ಸಲ್ಲಿಸಿದೆ. ಇಂದಿನಿಂದ ಹತ್ತು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ನೆಚ್ಚಿನ ನಟರ ವಿವಿಧ ಕಲಾಕೃತಿಗಳನ್ನೂ ಅಲ್ಲಿ ನೋಡಬಹುದಾಗಿದೆ.