ಸುಳ್ಯ : ಆ.3ರ ಸಂಜೆ ಸುರಿದ ಬಾರೀ ಮಳೆಗೆ ಅರಂತೋಡು ಗ್ರಾಮದ ಬೆದ್ರು ಪಣೆಯಲ್ಲಿನ ಸೇತುವೆಯ ಒಂದು ಬದಿಯ ತಡೆಗೋಡೆ ಮತ್ತು ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡ ಘಟನೆ ನಡೆದಿದೆ.
ಇದರಿಂದಾಗಿ ಹೊಳೆಯ ಇನ್ನೊಂದು ಬದಿಯ ಹಲವಾರು ಮನೆಗಳ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೊಳೆ ದಾಟಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಸಮಸ್ಯೆ ಬೆಳಕಿಗೆ ಬಂದ ಕೂಡಲೇ ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆಯ ಸದಸ್ಯರು ಕೂಡಲೇ ಸ್ಥಳಕ್ಕೆ ತೆರಳಿ ಸ್ಥಳೀಯರ ನೆರವಿನೊಂದಿಗೆ ಅಡಿಕೆ ಮರದ ಪಾಲ ನಿರ್ಮಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಟ್ಟಿರುತ್ತಾರೆ.
ಗ್ರಾಮ ಪಂಚಾಯತ್ ಸದಸ್ಯ ಕೇಶವ ಅಡ್ತಲೆ ಹಾಗೂ ಇನ್ನೊರ್ವ ಸದಸ್ಯೆ ಸುಜಯಾ ಮೇಲಡ್ತಲೆಯವರ ಪತಿ ಲೋಹಿತ್ ಮೇಲಡ್ತಲೆ ಸಹಕಾರ ನೀಡಿದರು. ಈ ಸೇತುವೆಯ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು ಶೀಘ್ರ ಉತ್ತಮ ಸೇತುವೆ ಹಾಗೂ ಅಡ್ತಲೆಯಿಂದ ಬೆದ್ರು ಪಣೆಗೆ ತೆರಳುವ ರಸ್ತೆಯನ್ನು ಸಮರ್ಪಕವಾಗಿ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಸರಕಾರವನ್ನು ಆಗ್ರಹಿಸಿದ್ದಾರೆ.