ಸಮಗ್ರ ನ್ಯೂಸ್: ನಿರಂತರ ಮಳೆಯಿಂದಾಗಿ ಸುಳ್ಯ, ಮಡಿಕೇರಿ ತಾಲೂಕಿನ ಗಡಿಭಾಗ ಅಕ್ಷರಶಃ ನರಕ ಸದೃಶವಾಗಿದೆ. ಕಲ್ಲುಗುಂಡಿ,ಸಂಪಾಜೆ, ಗೂನಡ್ಕ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.
ಕಲ್ಲುಗುಂಡಿ ಬಳಿ ಸೇತುವೆ ಕುಸಿಯುವ ಭೀತಿ ಎದುರಾಗಿದ್ದು, ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಇನ್ನು ಮಾಣಿ- ಮೈಸೂರು ಹೆದ್ದಾರಿಯ ಪಾಲಡ್ಕ, ಅರಂಬೂರು ಬಳಿ ಪಯಸ್ವಿನಿ ನದಿನೀರು ಹೆದ್ದಾರಿಗೆ ಹರಿದಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಟ್ರಾಫಿಕ್ ಜ್ಯಾಮ್ ಉಂಟಾಗಿದೆ.
ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾಗಿರುವ ಕಲ್ಲುಗುಂಡಿಯಲ್ಲೂ ಪಯಸ್ವಿನಿ ನದಿ ಹರಿದ ಪರಿಣಾಮ ಕಲ್ಲುಗುಂಡಿ ಪರಿಸರ ಬಹುತೇಕ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿತ್ತು. ರಾಷ್ಟ್ರೀಯ ಹೆದ್ದಾರಿ 275 ರ ಮೇಲೆ ಪ್ರವಾಹದ ನೀರು ಹರಿದಿದ್ದು ಕೆಲವು ಮನೆಗಳ ಮೊದಲ ಮಹಡಿ ಮುಳುಗುವಷ್ಟು ನೀರು ನುಗ್ಗಿದೆ.
ರಾತ್ರಿ ಒಂಭತ್ತುವರೆ ಗಂಟೆ ಸಮಯದಲ್ಲಿ ಪ್ರವಾಹದ ನೀರು ನುಗ್ಗಿರುವುದರಿಂದ ಜನರು ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಸಂಪೂರ್ಣ ಜಲಾವೃತಗೊಂಡು ಮನೆಯ ಎಲ್ಲಾ ವಸ್ತುಗಳು ನೀರುಪಾಲಾಗಿವೆ. ಜನರು ಮೊದಲ ಮಹಡಿ ಮತ್ತು ಮೇಲ್ಚಾವಣಿ ಏರಿ ಜೀವ ಉಳಿಸಿಕೊಂಡಿದ್ದಾರೆ.
ಮುಂಜಾನೆ ಐದುಗಂಟೆಯವರೆಗೆ ಜನರು ಜಲಾವೃತವಾಗಿರುವ ಮನೆಗಳ ಛಾವಣಿಗಳ ಮೇಲೆ ಕಾಲ ಕಳೆದಿದ್ದಾರೆ. ಮನೆಗಳು ಅಷ್ಟೇ ಅಲ್ಲ, ಹತ್ತಾರು ಅಂಗಡಿಗಳು ಪ್ರವಾಹಕ್ಕೆ ಸಿಲುಕಿ ಅಪಾರ ನಷ್ಟ ಸಂಭವಿಸಿದೆ.