ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿ ಭಾಗದಲ್ಲಿ ಕಳೆದೊಂದು ವಾರದಲ್ಲಿ ಹಲವು ಅಹಿತಕರ ಘಟನೆಗಳು ನಡೆದಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಕೇರಳದ ಲಿಂಕ್ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಕೇರಳ ಗಡಿಭಾಗದಲ್ಲಿ ತಪಾಸಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದು, ಇರೋ ಬರೋ ವಾಹನಗಳನ್ನೆಲ್ಲಾ ತಪಾಸಣೆ ನಡೆಸುತ್ತಿದ್ದಾರೆ. ಒಂದೆಡೆ ಕ್ರಿಮಿನಲ್ ಗಳ ಕುರಿತು ಮಾಹಿತಿ ಪತ್ತೆ ಕಾರ್ಯ ನಡೆಯುತ್ತಿದ್ದು ಇದು ಎಷ್ಟು ಸೇಫ್ ಎಂಬ ಪ್ರಶ್ನೆ ಉಧ್ಬವಿಸಿದೆ.
ಕೇರಳ ಗಡಿಭಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿ ತಪಾಸಣೆ ನಡೆಸುತ್ತಿದ್ದಾರೆ. ಗಡಿಭಾಗದಲ್ಲಿ ಒಂದೆರಡು ಪೊಲೀಸರು ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಬಿಡುತ್ತಿರುವುದು ಗೃಹ ಇಲಾಖೆಗೂ ತಲೆನೋವು ತರಿಸಿದೆ. ಹಗಲು, ರಾತ್ರಿ ಪಹರೆ ಕಾಯುವ ಪೊಲೀಸರ ಪಾಡು ಹೇಳತೀರದು.
ಆದರೆ ಇದಕ್ಕೆ ಭಿನ್ನವಾಗಿ ಕೇರಳ ಸರ್ಕಾರದ ಗೃಹ ಇಲಾಖೆ ಇಡೀ ಕೇರಳ ಗಡಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದೆ. ಕರ್ನಾಟಕ, ತಮಿಳುನಾಡು ಸಂಪರ್ಕಿಸುವ ಎಲ್ಲಾ ಗಡಿ ರಸ್ತೆಗಳಲ್ಲಿ ಉತ್ತಮ ದರ್ಜೆಯ ಸಿಸಿ ಟಿವಿ ಅಳವಡಿಸಿದ್ದು, ಇವು ಆಯಾ ಜಿಲ್ಲೆಗಳ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಕಚೇರಿಗೆ ಸಂಪರ್ಕಗೊಂಡಿವೆ.
ಗಡಿಭಾಗದಲ್ಲಿ ರಾಜ್ಯ ಪ್ರವೇಶಿಸುವ ಮತ್ತು ಹೊರಹೋಗುವ ಎಲ್ಲಾ ವಾಹನಗಳ ದಾಖಲೆಗಳು ಕಂಪ್ಯೂಟರ್ ಮೂಲಕ ದಾಖಲಾಗುತ್ತಿದ್ದು ಯಾವುದೇ ಲೋಪದೋಷಗಳಿದ್ದರೂ ಆಯಾ ವಾಹನಗಳ ಮಾಲೀಕರಿಗೆ ನೋಟೀ ಜಾರಿಯಾಗುತ್ತದೆ. ಅಲ್ಲದೇ ಈ ಸಿಸಿ ಟಿವಿ ಕ್ಯಾಮರಾಗಳು ಉತ್ಕೃಷ್ಟ ದರ್ಜೆಯದಾಗಿದ್ದು, ವಾಹನದ ಚಹರೆಗಳನ್ನು ಬಹುದೂರದಿಂದಲೇ ಗುರುತಿಸಬಹುದಾಗಿದೆ.
ಇನ್ನು ಕರ್ನಾಟಕ ಸರ್ಕಾರ ಅಳವಡಿಸಿರುವ ಸಿಸಿ ಕ್ಯಾಮರಾಗಳು ಬಹುತೇಕ ಸರಿಯಾಗಿಲ್ಲ. ಇದ್ದರೂ ಅದರಲ್ಲಿ ಸ್ಪಷ್ಟತೆಗಳು ಸಿಗ್ತಾ ಇಲ್ಲ.
ರಸ್ತೆಯ ಒಂದು ಮೂಲೆಯಲ್ಲಿ ಕ್ಯಾಮರಾ ಅಳವಡಿಸಿದ್ದು, ಬಹುತೇಕ ವಾಹನಗಳು ಅದರಲ್ಲಿ ಸರಿಯಾಗಿ ಸೆರೆಯಾಗುವುದು ಕಷ್ಟ.
ಕೇರಳ ಮಾದರಿಯಲ್ಲೇ ಕರ್ನಾಟಕದ ಗಡಿಭಾಗದಲ್ಲಿ ಕ್ರಮ ಕೈಗೊಂಡಲ್ಲಿ ಅತ್ಯಂತ ಯಶಸ್ವಿಯಾಗಿ ಯಾವುದೇ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ಬದಲಾವಣೆ ತರಬಹುದು. ಗಡಿಭಾಗದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು, ಆರೋಪಿಗಳನ್ನು ಪತ್ತೆ ಹಚ್ಚಲು ಆದಷ್ಟು ಬೇಗ ಸರ್ಕಾರ ಈ ಕುರಿತು ಗಮನಹರಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.