ಸಮಗ್ರ ನ್ಯೂಸ್: ಕುಮಾರಧಾರ ತಪ್ಪಲು ಹಾಗೂ ಪುಷ್ಪಗಿರಿ ಅರಣ್ಯ ಭಾಗದಲ್ಲಿ ಭಾರೀ ಮೇಘ ಸ್ಪೋಟಗೊಂಡ ಪರಿಣಾಮ ಯಾತ್ರಾಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸಂಪೂರ್ಣ ಜಲಾವೃತಗೊಂಡಿದೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಜಲಕಂಟಕ ಎದುರಾಗಿದ್ದು, ದೇವಳದ ಸುತ್ತಲೂ ದರ್ಪಣ ತೀರ್ಥ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮವಾಗಿ ಎರಡು ದಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತಾಧಿಗಳಿಗೆ ನಿಷೇಧ ಹೇರಲಾಗಿದೆ. ಆದಿಸುಬ್ರಹ್ಮಣ್ಯ ದೇವಸ್ಥಾನದ ಪ್ರಾಂಗಣದೊಳಗೂ ನೀರು ನುಗ್ಗಿದ್ದು, ಸಂಪರ್ಕ ಕಡಿತಗೊಂಡಿದೆ.
ಇನ್ನು ಕುಮಾರಧಾರ ಸ್ನಾನಘಟ್ಟದ ಸಮೀಪ ಪರ್ವತಮುಖಿ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದ ಪರಿಣಾಮ ಎರಡು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುವ ಮಾಹಿತಿ ಲಭಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಸೂಚನೆಯಂತೆ ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡ ತೆರಳಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಈ ನಡುವೆ ನದಿಗಳು ಉಕ್ಕಿದ ಪರಿಣಾಮ ರಕ್ಷಣೆಗೆ ಅಡ್ಡಿ ಎದುರಾಗಿದೆ.
ಇತ್ತ ಕಲ್ಮಕಾರು, ಬಾಳುಗೋಡು, ಕೊಲ್ಲಮೊಗರು, ಗುತ್ತಿಗಾರು, ದೇವಚಳ್ಳ, ಮಡಪ್ಪಾಡಿ, ನಾಲ್ಕೂರು, ಏನೆಕಲ್ಲು, ಹರಿಹರ ಪಲ್ಲತ್ತಡ್ಕ, ಸೇರಿದಂತೆ ಅವಿಭಜಿತ ಸುಳ್ಯ ತಾಲೂಕಿನ ಬಹುತೇಕ ಗ್ರಾಮಗಳು ಮಳೆಯ ಆರ್ಭಟದಿಂದ ತತ್ತರಿಸಿವೆ. ಹಲವೆಡೆ ಸೇತುವೆಗಳು ಜಲಾವೃತಗೊಂಡಿದ್ದು, ತಗ್ಗುಪ್ರದೇಶಗಳು ನೆರೆ ನೀರಿನಿಂದ ಆವೃತ್ತವಾಗಿವೆ. ಏಕಾಏಕಿ ಸುರಿದ ರಣಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.