ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೊಬ್ಬರು ಪೊಲೀಸ್ ಕಾಲರ್ ಹಿಡಿದು ರಂಪಾಟ ಮಾಡಿರುವ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ನಡುವೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ಸಂಬಂಧಿಸಿದಂತೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ನಡುವೆ ದಿಗ್ವಿಜಯ ಸಿಂಗ್ ಮತ್ತು ಶಾಸಕರಾದ ಆರಿಫ್ ಮಸೂದ್ ಮತ್ತು ಪಿಸಿ ಶರ್ಮಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭೋಪಾಲ್‍ನ ಜಿಲ್ಲಾ ಪಂಚಾಯತ್ ಕಚೇರಿಯ ಹೊರಗೆ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.
ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸರು ಮತ್ತು ಆಡಳಿತ ವ್ಯವಸ್ಥೆ ಕೆಲಸ ಮಾಡುತ್ತಿದೆ ಎಂದು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಆರೋಪಿಸಿದ್ದಾರೆ. ಇದರಿಂದ ಕೋಪಗೊಂಡ ಸಚಿವ ವಿಶ್ವಾಸ್ ಸಾರಂಗ್ ಅವರು ಕಾರಿನಿಂದ ಕೆಳಗಿಳಿದಾಗ ಕಾಂಗ್ರೆಸ್ ಬೆಂಬಲಿಗರು ಅವರನ್ನು ಸುತ್ತುವರಿದಿದ್ದಾರೆ. ಈ ವೇಳೆ ಸಾರಂಗ್ ಕಾಂಗ್ರೆಸ್ ಬೆಂಬಲಿಗರಿಗೆ ಈ ದಾದಾಗಿರಿ ಕೆಲಸ ನಡೆಯುವುದಿಲ್ಲ ಎಂದು ಹೇಳಿದರು. ಸಚಿವ ಸಾರಂಗ್ ಅವರ ಹೇಳಿಕೆಗೆ ಪರಿಸ್ಥಿತಿ ಉದ್ವಿಗ್ನಗೊಂಡು ಮಾತಿನ ಚಕಮಕಿ ನಡೆಯಿತು. ಆದರೆ, ಸಾಕಷ್ಟು ಪ್ರಯತ್ನಗಳ ನಂತರ ಪೊಲೀಸರು ಪರಿಸ್ಥಿಯನ್ನು ಹತೋಟಿಗೆ ತಂದರು.
ಈ ಕುರಿತ ವೀಡಿಯೋದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಪಂಚಾಯತ್ ಕಚೇರಿಗೆ ಪ್ರವೇಶಿಸದಂತೆ ತಡೆಯಲು ಪೊಲೀಸರು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಒಬ್ಬ ಪೊಲೀಸ್ ಅಧಿಕಾರಿಯ ಕೊರಳಪಟ್ಟಿ ಹಿಡಿದು ದಿಗ್ವಿಜಯ್ ಸಿಂಗ್ ಹಿಂಸಾತ್ಮಕವಾಗಿ ತಳ್ಳಿರುವುದನ್ನು ಕಾಣಬಹುದು.