ಸಮಗ್ರ ವಿಶೇಷ: ಜು.26ರ ರಾತ್ರಿ ಯುವ ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರವರ ಮೇಲೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಆಯುಧಗಳಿಂದ ಬರ್ಬರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಬಳಿಕ ರಕ್ತದ ನಡುವಿನಲ್ಲಿ ಬಿದ್ದಿದ್ದ ಪ್ರವೀಣ್‌ನನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅದಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಯುವ ವಯಸ್ಸಿನಿಂದಲೇ ಹಿಂದೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದಲ್ಲದೇ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದವರು ಪ್ರವೀಣ್ ನೆಟ್ಟಾರು. ಬಿಜೆಪಿ ಯುವ ಮೋರ್ಚಾದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಇದರ ಜೊತೆಗೆ ಬೆಳೆಯುತ್ತಿರುವ ಯುವಕರೊಡನೆ ಹಾಗೂ ಜೊತೆಗಿರುವ ಕಾರ್ಯಕರ್ತರೊಡನೆ ತುಂಬಾ ಅತ್ಮೀಯರಾಗಿದ್ದುಕೊಂಡು ಅವರ ಎಲ್ಲಾ ಕಷ್ಟಸುಖಗಳಿಗೆ ರಾತ್ರಿ ಹಗಲೆನ್ನದೆ ಸ್ಪಂದಿಸಿದವರು ಪ್ರವೀಣ್. ಹೀಗೆ ಬೆಳೆಯುತ್ತಿರುವಾಗ ತನಗೆ ಗೊತ್ತಿಲ್ಲದಂತೆ ಸಾವಿರಾರು ಯುವಕರು ಇವರ ಜೊತೆಗೆ ನಿಂತಿದ್ದರು. ಆದರೂ ಯಾವುದೇ ಆಹಂ ಇಲ್ಲದೆ ಬೆಳೆದವರು ಪ್ರವೀಣ್.

ಈ ಹಿನ್ನಲೆ ಪ್ರವೀಣ್‌ರವರ ಸಾವಿನ ಸುದ್ದಿ ಕೇಳುತ್ತಿದಂತೆ ನೂರಾರು ಕಾರ್ಯಕರ್ತರು ಆಸ್ಪತ್ರೆಯಲ್ಲಿ ಸೇರಿದ್ದರು. ಯಾವಾಗ ಯುವ ಕಾರ್ಯಕರ್ತನ ಹತ್ಯೆ ಬರ್ಬರವಾಗಿ ಆಯಿತೋ ಅಲ್ಲಿಂದ ಶುರುವಾದ ಬಿಜಿಪಿ ಮೇಲಿನ ದ್ವೇಶ ಇವತ್ತಿಗೂ ಉರಿಯುತ್ತಲೇ ಇದೆ. ಪುತ್ತೂರಿನಿಂದ ಕಾಣಿಯೂರು-ನಿಂತಿಕಲ್ಲು ರಸ್ತೆ ಮೂಲಕ ಪ್ರವೀಣನ ಶವಯಾತ್ರೆ ಬರುತ್ತಿರುವಾಗ ಸಾವಿರಾರು ಜನ ಆತನ ಶವಕ್ಕೆ ಹೂ ಹಾಕಿ ನಮಸ್ಕರಿಸಿದ್ದರು. ಅಲ್ಲದೆ ದಾರಿಯೂದ್ದಕ್ಕೂ ಪ್ರವೀಣ್ ಆಮರ್ ರಹೇ ಎಂಬ ಘೋಷಣೆ ಕೂಗಿದ್ದರು. ಬೆಳ್ಳಾರೆ ತಲುಪುವ ವೇಳೆ ಜಾತಿ ಭೇದ ಮರೆತು, ಸಾವಿರಾರು ಜನ ಸಾಗರವೇ ತಲುಪಿತ್ತು.

ಊರಲ್ಲೆ ಹೊತ್ತಿ ಉರಿದ ಮೇಲೆ ಕೆರೆ ತೋಡಿದಂತೆ ಭರ್ಜರಿ ಎಂಟ್ರಿ ಕೊಟ್ಟದ್ದು ಬಿಜೆಪಿ ನಾಯಕರು. ಜಿಲ್ಲಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್, ಸಚಿವರಾದ ಅಂಗಾರ, ಸುನೀಲ್ ಕುಮಾರ್ ಮತ್ತು ಶಾಸಕ ಸಂಜೀವ ಮಠಂದೂರು ಹೀಗೆ ಸಾಲು ಸಾಲು ನಾಯಕರು ಕೊನೆಕ್ಷಣದಲ್ಲಿ ಏನೂ ಆಗಿಲ್ಲವೆಂಬಂತೆ ಬಂದರು.

ಈ ವೇಳೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿತ್ತು. ಪ್ರತಿ ನಾಯಕರಿಗೂ ತುಂಬಾ ಹೀನಾಯವಾದ ಮುಖಭಂಗ ಎಂಬ ಸನ್ಮಾನ ದೊರೆಯಿತು.
ಯಾಕೆ ಗೊತ್ತಾ?…
ಈ ಹಿಂದೆ ನಡೆದ ಬೇರೆಲ್ಲಾ ಹಿಂದೂ ಕಾರ್ಯಕರ್ತರ ಕೊಲೆಗಳಲ್ಲಿ ಅನ್ಯಮತೀಯರ ವಿರುದ್ಧ ಪ್ರತಿಭಟನೆ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಪ್ರವೀಣ್ ಹತ್ಯೆಯಲ್ಲಿ ಅದು ಆಗಿಲ್ಲ, ಬದಲಿಗೆ ನಿಮ್ಮ ನಂಬಿಕೆ ದ್ರೋಹಕ್ಕೆ, ಸೋಗಲಾಡಿತನಕ್ಕೆ, ನಿಮ್ಮ ಎಡಬಿಡಂಗಿತನದ ನಿಲುವಿಗೆ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.


ಇದು ನೀವೇ ಮುಖಕ್ಕೆ ಮಾಡಿಕೊಂಡ ಮಂಗಳಾರತಿ ಅಂದರೂ ತಪ್ಪಲ್ಲ. ಕಾರ್ಯಕರ್ತರು ನಿಮ್ಮನ್ನು ಅಷ್ಟು ಎತ್ತರದಲ್ಲಿ ಕೂರಿಸಿದ್ದಕ್ಕೆ, ಅವರು ನಿಮ್ಮನ್ನು ಕಣ್ಮುಚ್ಚಿ ನಂಬಿದ್ದಕ್ಕೆ ಈಗ ಹತಾಶೆ ಪಡುತ್ತಿದ್ದಾರೆ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮೇಲೆ ಹತ್ತು ಪಟ್ಟು ಹೆಚ್ಚೇ ಆಕ್ರೋಶಿತರಾಗಿದ್ದಾರೆ.
ನಾಯಕರನ್ನು ಬೆಳೆಸಿದ ದೇವದುರ್ಲಭ ಕಾರ್ಯಕರ್ತರ ಮುಂದೆ ನಾಯಕರು ದುರ್ಬಲರಾಗುತ್ತಾರೆ ಎಂದರೆ ಅವರ ನಂಬಿಕೆಗೆ ನಾಯಕರು ಅರ್ಹಲಲ್ಲ ಎಂದರ್ಥವಲ್ಲವೆ?.

ಈಗಲೂ ನೀವೇನೂ ಆಗಿಲ್ಲ ಎಂಬಂತೆಯೇ ಇದ್ದೀರಿ. ಅತ್ತ ಯುವ ಮುಖಂಡರು ರಾಜಿನಾಮೆ ನೀಡುತ್ತಿದ್ದರೆ ನೀವು ಬೇಕಾದರೆ ಕೊಡುತ್ತೇನೆ, ಗುಡ್ಡ ಕಡಿಯುತ್ತೇನೆ, ಕಠಿಣ ಕ್ರಮ ಹೀಗೆ ಪೊಳ್ಳು ಭರವಸೆ ಮಾತ್ರ ನಿಮ್ಮದು. ಯಾಕೆಂದರೆ ನಿಮಗೆ ಅಧಿಕಾರದ ದಾಹ ಇನ್ನೂ ಕಮ್ಮಿ ಆಗಿಲ್ಲ. ನಿಮಗೆ, ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಮಾಡಿ ಇಡುವುದು ಇನ್ನೂ ಬಾಕಿ ಇದೆ ಅಲ್ವೇ?. ಇದನ್ನು ನಾವು ಹೇಳ್ತಿಲ್ಲ. ನಿಮ್ದೇ ಕಾರ್ಯಕರ್ತರು ನಿಮ್ಮೆದುರೇ ಹೇಳಿದ್ದನ್ನು ಕೇಳಿಯೂ ಕೇಳಿಸದಂತೆ ಹೋದವರಲ್ಲವೇ?
ಅಧಿಕಾರ ಎಷ್ಟು ದಿನ? ಒಂದಲ್ಲ ಒಂದು ದಿನ ಪಟ್ಟ ಇಳಿಯಲೇಬೇಕು. ಅದನ್ನು ನಿಮ್ಮದೇ ಕಾರ್ಯಕರ್ತರ ಮಾಡುವ ಮೊದಲು ಎಚ್ಚೆತ್ತುಕೊಂಡರೆ ಒಳಿತು. ಇಲ್ಲವಾದಲ್ಲಿ ಮುಂದೆ ನಿಮ್ಮ ರಕ್ಷಣೆಗೆ ಯಾವ ಮೋದಿಯೂ, ಯೋಗಿಯೂ ಬರಲಾರರು. ಇನ್ನಾದರೂ ಹಣ, ಅಧಿಕಾರ ದಾಹ ಬಿಡಿ, ಕಾರ್ಯಕರ್ತರ ಪ್ರಾಣ ಉಳಿಸಿಕೊಡಿ.
*ಸಂಪಾದಕ