ಸಮಗ್ರ ನ್ಯೂಸ್: ಬಿಜೆಪಿ ಯುವಮೋರ್ಚಾ ಮುಖಂಡ, ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರುರವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಹುಟ್ಟೂರು ನೆಟ್ಟಾರಿನಲ್ಲಿ ನಡೆಯಿತು.
ಪುತ್ತೂರಿನ ಪ್ರಗತಿ ಆಸ್ಪತ್ರೆಯಿಂದ ಪ್ರವೀಣ್ ಮೃತದೇಹವನ್ನು ಮೆರವಣಿಗೆ ಮೂಲಕ ಹುಟ್ಟೂರು ಬೆಳ್ಳಾರೆಯ ನೆಟ್ಟಾರಿಗೆ ತರಲಾಯಿತು. ಈ ವೇಳೆ ದಾರಿಯುದ್ದಕ್ಕೂ ನೂರಾರು ಕಾರ್ಯಕರ್ತರು ಜಮಾಯಿಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪ್ರಸಂಗ ನಡೆಯಿತು.
ಈ ವೇಳೆ ಅಂತಿಮ ದರ್ಶನಕ್ಕೆ ಆಗಮಿಸಿದ ಸಚಿವರಾದ ಎಸ್.ಅಂಗಾರ, ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲುರವರಿಗೆ ಪ್ರವೀಣ್ ಅಭಿಮಾನಿಗಳು ದಿಗ್ಬಂಧನ ಹಾಕಿದರು.
ಬೆಳ್ಳಾರೆಯಲ್ಲಿ ಅಂತಿಮ ದರ್ಶನಕ್ಕಾಗಿ ಪ್ರವೀಣ್ ಪಾರ್ಥಿವ ಶರೀರವನ್ನು ಇರಿಸಿದ್ದು, ಈ ವೇಳೆ ನೂರಾರು ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿದರು.
ಬಳಿಕ ಮೃತದೇಹವನ್ನು ಪ್ರವೀಣ್ ಹುಟ್ಟೂರು ನೆಟ್ಟಾರಿಗೆ ಕೊಂಡೊಯ್ಯಲಾಯಿತು. ನಂತರ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಅಂತಿಮ ವಿಧಿವಿಧಾನ ಸಂದರ್ಭದಲ್ಲಿ ಪ್ರವೀಣ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮತ್ತೊಂದೆಡೆ ಸಂಘಟನೆಗಳ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಪಟ್ಟರು.
ಸದ್ಯ ಬೆಳ್ಳಾರೆ ಬೂದಿಮುಚ್ಚಿದ ಕೆಂಡದಂತಿದ್ದು, ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಪಗಾವಲು ಹಾಕಿದ್ದಾರೆ.
50ಲಕ್ಷ ಪರಿಹಾರ: ಸಂಘಟನೆಗಳ ಮೂಲಕ ಗುರುತಿಸಿಕೊಂಡಿದ್ದ ಪ್ರವೀಣ್ ಕುಟುಂಬಕ್ಕೆ ರಾ.ಸ್ವ.ಸೇ ಸಂಘದಿಂದ 50ಲಕ್ಷ ಪರಿಹಾರ ನೀಡುವುದಾಗಿ ಪ್ರಮುಖರಾದ ನ.ಸೀತಾರಾಮ ಹೇಳಿದ್ದಾರೆ. ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿರುವ ಅವರು ಈ ವಿಷಯ ತಿಳಿಸಿದ್ದಾರೆ.