Ad Widget .

ಪುತ್ತೂರು: ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ಹತ್ಯೆ ಪ್ರಕರಣ| ತಡರಾತ್ರಿ ಹಿಂದೂ ಕಾರ್ಯಕರ್ತರಿಂದ ಡಿಸಿ ಬರಬೇಕೆಂದು ಧರಣಿ| ಇಂದು ಮೆರವಣಿಗೆಯಲ್ಲಿ ಕೊಂಡೊಯ್ದು ಅಂತ್ಯಸಂಸ್ಕಾರ; ಬಂದ್ ಗೆ ಕರೆ

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಆಕ್ರೋಶಿತರಾದ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಕುಟುಂಬಸ್ಥರು ಡಿಸಿ ಬರಬೇಕೆಂದು ಪಟ್ಟು ಹಿಡಿದು ಮೃತದೇಹ ತೆಗೆಯಲು ಬಿಡದೇ ಪ್ರತಿಭಟನೆ ನಡೆಸಿದ ಘಟನೆ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಮುಂಭಾಗ ನಡೆಯಿತು.

Ad Widget . Ad Widget .

ಬಳಿಕ ತಡ ರಾತ್ರಿ ಮಂಗಳೂರಿನಿಂದ ಜಿಲ್ಲಾಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರ ಜತೆ ಮಾತನಾಡಿ ಮನವೊಲಿಸಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

Ad Widget . Ad Widget .

ಆಸ್ಪತ್ರೆಯಲ್ಲಿ ಪ್ರವೀಣ್ ನೆಟ್ಟಾರ್ ಮೃತಪಟ್ಟಿರುವುದು ಘೋಷಣೆಯಾಗುತ್ತಲೇ ಪುತ್ತೂರು ಸುಳ್ಯ ಬೆಳ್ಳಾರೆಯಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಹಾಗೂ ಅವರನ್ನು ಚಿಕಿತ್ಸೆಗೆ ದಾಖಲಿಸಿದ್ದ ಪ್ರಗತಿ ಆಸ್ಪತ್ರೆ ಮುಂಭಾಗ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು.

ಪ್ರವೀಣ್ ಅವರ ಮೃತ ದೇಹ ಪುತ್ತೂರಿನ ಪ್ರಗತಿ ಆಸ್ಪತ್ರೆಯಿಂದ, ಮರಣೋತ್ತರ ಪರೀಕ್ಷೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲು ಪೊಲೀಸರು ಸಿದ್ದತೆ ನಡೆಸಿದರೂ
ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಬರುವ ತನಕ ಮೃತದೇಹವನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಆಸ್ಪತ್ರೆ ಮುಂಭಾಗ ನೆರೆದಿದ್ದವರು ಆಗ್ರಹಿಸಿದ್ದರು. ಅಲ್ಲದೇ ಆಸ್ಪತ್ರೆ ಮುಂಭಾಗದ ಮುಖ್ಯ ರಸ್ತೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದರು . ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಟಾಧಿಕಾರಿ ಋಷಿಕೇಷ್ ಸೋನಾವಣೆ, ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಆಗಮಿಸಿ ಪ್ರತಿಭಟನಕಾರರ ಮನವೊಲಿಸುವ ಯತ್ನ ನಡೆಸಿದರಾದರೂ ,ಅವರು ಡಿಸಿ ಬರುವಂತೆ ಪಟ್ಟು ಹಿಡಿದರು.

ಬಳಿಕ ತಡ ರಾತ್ರಿ 1.30 ರ ಸುಮಾರಿಗೆ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆವಿಯವರು ಆಗಮಿಸಿ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು. ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಕಠಿನ ಶಿಕ್ಷೆಯನ್ನು ಕೊಡಿಸಲಾಗುವುದು. ಈಗಾಗಲೇ ಪೊಲೀಸ್ ಇಲಾಖೆ ಇದರ ತನಿಖೆಯಲ್ಲಿ ತೊಡಗಿಸಿಕೊಂಡಿದೆ. ಮೃತರ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ನೀಡಬೇಕೆಂಬ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು , ಅದನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ ಡಿಸಿಯವರು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು. ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಇಂದು ಬೆಳಗ್ಗೆ 9.30 ಕ್ಕೆ ಪುತ್ತೂರು ನಗರದಿಂದ ಮೆರವಣಿಗೆಯಲ್ಲಿ ಹೊರಟು ದರ್ಬೆ, ಸವಣೂರು ಕಾಣಿಯೂರು, ನಿಂತಿಕಲ್ಲು ಮೂಲಕ ಬೆಳ್ಳಾರೆಗೆ‌ ಪ್ರವೀಣ್ ಅವರ ಮೃತದೇಹವನ್ನು ಕೊಂಡೊಯ್ಯಲು ಹಿಂದೂ ಸಂಘಟನೆಗಳು ಹಾಗೂ ಬಂಧು ಬಳಗದವರು ನಿರ್ಧರಿಸಿದ್ದಾರೆ.

ಅಲ್ಲದೇ ಇಂದು ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ, ವಾಹನ ಸಂಚಾರ ನಿಲ್ಲಿಸಿ ಬಂದ್ ನಡೆಸಬೇಕೆಂದು ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದಾರೆ

ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋನಾವಣೆ, ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಹಾಗೂ ಸುಳ್ಯ, ಬೆಳ್ಳಾರೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

Leave a Comment

Your email address will not be published. Required fields are marked *