ಸಮಗ್ರ ನ್ಯೂಸ್: ಒಂದನೇ ತರಗತಿಗೆ ದಾಖಲು ಮಾಡಲು ಕನಿಷ್ಠ ವಯೋಮಿತಿಯನ್ನು 5.5 ವರ್ಷಗಳ ಬದಲಾಗಿ ಜೂನ್-01 ಕ್ಕೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರಬೇಕೆಂದು ಎಂಬುದಾಗಿ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ಈ ಕುರಿತಂತೆ ನಡವಳಿಯನ್ನು ಹೊರಡಿಸಿರುವಂತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ದಿನಾಂಕ 20-03-2020ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಆರ್ ಟಿ ಇ ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಮೊದಲು ಎಲ್ ಕೆಜಿ, ಯುಕೆಜಿ ಬಳಿಕ ಒಂದನೇ ತರಗತಿಗಾಗಿ ಶಾಲೆಗೆ ದಾಖಲಾಗೋದಕ್ಕೆ 5.5 ವರ್ಷ ತುಂಬಿರುವುದು ಕಡ್ಡಾಯವಾಗಿತ್ತು. ಶೈಕ್ಷಣಿಕ ವರ್ಷ ಜೂನ್ 01 ಆರಂಭಕ್ಕೆ ಸರಿಯಾಗಿ 1ನೇ ತರಗತಿಗೆ ದಾಖಿಸಲು ಇದು ಕಡ್ಡಾಯವಾಗಿತ್ತು. ಇದೀಗ ಈ ವಯೋಮಿತಿಯನ್ನು ಬದಲಾವಣೆ ಮಾಡಲಾಗಿದೆ. ಇನ್ಮುಂದೆ ಒಂದನೇ ತರಗತಿಗೆ ದಾಖಲಾಗಲು ಮಗುವಿನ ವಯಸ್ಸು ಕಡ್ಡಾಯವಾಗಿ 6 ವರ್ಷ ತುಂಬಿರಬೇಕಾಗಿದೆ.