Ad Widget .

ಕಾರ್ಗಿಲ್ ವಿಜಯ ದಿವಸ್| ಮರೆಯಲಾಗದ ಆ ನೆನಪುಗಳು

ಸಮಗ್ರ ನ್ಯೂಸ್: ಇಂದು (ಜು.26) ಕಾರ್ಗಿಲ್ ವಿಜಯ ದಿವಸ, ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತದ ಯೋಧರನ್ನು ಇಡೀ ದೇಶವೇ ಗೌರವಿಸುವ ದಿನ. ಈ ದಿನದಂದು ಕಾರ್ಗಿಲ್ ಯುದ್ಧದ ಇತಿಹಾಸ, ಮಹತ್ವ ಮತ್ತು ಸ್ಮರಣಾರ್ಥಗಳ ಬಗ್ಗೆ ನೋಡೋಣ.
ಯಾಕೆಂದರೆ ಇದು ಇಡೀ ದೇಶವೇ ಹೆಮ್ಮೆ ಪಡುವ ದಿವಸ.

Ad Widget . Ad Widget .

1999ರ ಇದೇ ದಿನದಂದು ಪಾಕಿಸ್ತಾನದ ವಿರುದ್ಧ ಕಾರ್ಗಿಲ್​ನಲ್ಲಿ ನಡೆದ ಯುದ್ಧದಲ್ಲಿ ಭಾರತ ಜಯ ಸಾಧಿಸಿದ ದಿವಸವಿದು. ಇದರ ನೆನಪಿಗಾಗಿ ಪ್ರತಿ ವರ್ಷ ಜು.26 ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಈ ದಿನದಂದು ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತೀಯ ಸೈನಿಕರಿಗೆ ಗೌರವ ನಮನಗಳನ್ನು ಸಲ್ಲಿಸಲಾಗುತ್ತದೆ.

Ad Widget . Ad Widget .

ಇತಿಹಾಸ ಮತ್ತು ಮಹತ್ವ:
1971 ರ ಇಂಡೋ-ಪಾಕ್ ಯುದ್ಧದ ನಂತರ ಹಲವಾರು ಮಿಲಿಟರಿ ಒಪ್ಪಂದಗಳು ನಡೆದರೂ 1998 ರಲ್ಲಿ ಎರಡೂ ರಾಷ್ಟ್ರಗಳು ಪರಮಾಣು ಪರೀಕ್ಷೆಗಳನ್ನು ನಡೆಸಿದವು. 1990 ರ ದಶಕದಲ್ಲಿ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಈ ಸಮಸ್ಯೆಯನ್ನು ಪರಿಹರಿಸಲು ಭಾರತ ಮತ್ತು ಪಾಕಿಸ್ತಾನವು ಫೆಬ್ರವರಿ 1999 ರಲ್ಲಿ ಲಾಹೋರ್ ಘೋಷಣೆಗೆ ಸಹಿ ಹಾಕಿದವು. ಆ ಮೂಲಕ ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರವನ್ನು ಭರವಸೆ ನೀಡಲಾಯಿತು. ಈ ಬೆಳವಣಿಗೆಗಳ ನಡುವೆ ತನ್ನ ಕುತಂತ್ರವನ್ನು ಮುಂದುವರಿಸಿದ ಪಾಕಿಸ್ತಾನ ತನ್ನ ಸೇನೆಯನ್ನು ರಹಸ್ಯವಾಗಿ ಭಾರತದ ಗಡಿ ನಿಯಂತ್ರಣ ರೇಖೆ ಕಡೆಗೆ ಕಳುಹಿಸಿತು. ಇದು 1999ರ ಮೇ ಮತ್ತು ಜುಲೈ ತಿಂಗಳಾಗಿತ್ತು.

ದುರದೃಷ್ಟವಶಾತ್, ಭಾರತೀಯ ಪಡೆಗಳಿಗೆ ಪಾಕಿಸ್ತಾನದ ಒಳ ನುಸುಳುವಿಕೆಯ ಪ್ರಮಾಣದ ಬಗ್ಗೆ ತಿಳಿದಿರಲಿಲ್ಲ ಮತ್ತು ಅದು ಸಣ್ಣ ಪ್ರಮಾಣದಲ್ಲಿದೆ ಎಂದು ಭಾವಿಸಲಾಗಿತ್ತು. ಆರಂಭದಲ್ಲಿ ಪಾಕಿಸ್ತಾನ ಸೇನೆಯು ಯುದ್ಧದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಒಪ್ಪಿಕೊಳ್ಳಲಿಲ್ಲ ಮತ್ತು ಆಕ್ರಮಣಕ್ಕೆ ಕಾಶ್ಮೀರಿ ಉಗ್ರಗಾಮಿಗಳನ್ನು ದೂಷಿಸಿತು. ಆದರೆ ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ಹೇಳಿಕೆಗಳು ಯುದ್ಧದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಸ್ಪಷ್ಟವಾಗಿ ಸೂಚಿಸಿದವು. ಭಾರತವು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಪಾಕಿಸ್ತಾನದ ವಿರುದ್ಧ ಆಪರೇಷನ್ ವಿಜಯ್‌ಗಾಗಿ 20,000 ಸೈನಿಕರನ್ನು ಕಳುಹಿಸಿತು.

ನಿರ್ಣಾಯಕ ಸ್ಥಳಗಳಲ್ಲಿ ಪಾಕಿಸ್ತಾನಿ ಸೈನಿಕರು ನೆಲೆಸುವ ಮೂಲಕ ಪಾಕಿಸ್ತಾನವು ಭಾರತದ ನಿಯಂತ್ರಿತ ಪ್ರದೇಶಗಳಲ್ಲಿನ ವಿವಿಧ ಆಯಕಟ್ಟಿನ ಸ್ಥಳಗಳನ್ನು ವಶಪಡಿಸಿಕೊಂಡಿತು. ಯುದ್ಧದ ಎರಡನೇ ಹಂತದಲ್ಲಿ ಯುದ್ಧತಂತ್ರದ ಸಾರಿಗೆ ಮಾರ್ಗಗಳನ್ನು ವಶಪಡಿಸಿಕೊಳ್ಳುವ ಮೂಲಕ ಭಾರತವು ದಿಟ್ಟ ಪ್ರತಿಕ್ರಿಯಿಸಿತು. ಅಲ್ಲದೆ ಭಾರತವು ವಾಯುಪಡೆಯನ್ನು ಕೂಡ ಯುದ್ಧದಲ್ಲಿ ಬಳಸುವ ಮೂಲಕ ಅಂತಿಮ ಹಂತದಲ್ಲಿ ಜು.26ರಂದು ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಿ ಜಯ ಸಾಧಿಸಿತು.

ಈ ಯುದ್ಧದಲ್ಲಿ ಭಾರತದ ನೂರಾರು ವೀರ ಯೋಧರು ಹುತಾತ್ಮರಾದರು. ಇವರನ್ನು ಗೌರವಿಸುವ ನಿಟ್ಟಿನಲ್ಲಿ ಜು.26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ. ಭಾರತದ ಪ್ರಧಾನ ಮಂತ್ರಿಗಳು ಪ್ರತಿ ವರ್ಷ ದೆಹಲಿ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಗೌರವ ಸಲ್ಲಿಸುತ್ತಾರೆ.

ಯುದ್ಧದ ಮುಖ್ಯಾಂಶಗಳು
1 ಕಾರ್ಗಿಲ್‌ ಯುದ್ಧ ಎರಡು ತಿಂಗಳು,
3 ವಾರ, 2 ದಿನಗಳ ಕಾಲ ನಡೆಯಿತು.
2 ಮೇ 3ರಂದು ಸ್ಥಳೀಯ ಕೆಲವು ಕುರಿಗಾಹಿಗಳು ಕಾರ್ಗಿಲ್‌ನ ಪರ್ವತ ಪ್ರದೇಶದಲ್ಲಿ ಅಸಹಜ ಚಟುವಟಿಕೆಗಳನ್ನು ಗಮನಿಸಿದರು. ಅದನ್ನು ತತ್‌ಕ್ಷಣ ಭಾರತೀಯ ಸೇನೆಯ
ಗಮನಕ್ಕೆ ತಂದರು.
3 ಮೇ 5ಕ್ಕೆ ಭಾರತೀಯ ಸೇನೆ ಸ್ಥಳಕ್ಕೆ ಪ್ರವೇಶಿಸಿತು. ಆಗ ಐವರು ಭಾರತೀಯ ಯೋಧರನ್ನು ವಶಕ್ಕೆ ತೆಗೆದುಕೊಂಡ ಪಾಕ್‌ ಸೈನಿಕರು, ಅವರನ್ನು ಕೊಂದರು.
4 ಮೇ 9ಕ್ಕೆ ಪಾಕ್‌ ಸೇನೆಯಿಂದ ಕಾರ್ಗಿಲ್‌ ವಲಯದಲ್ಲಿ ಭಾರೀ ಶೆಲ್‌ ದಾಳಿ ನಡೆಯಿತು. ಗಡಿ ನಿಯಂತ್ರಣ ರೇಖೆಯಲ್ಲಿ ಬರುವ ದ್ರಾಸ್‌, ಕಕ್ಸರ್‌, ಮುಶೊRàಹ್‌ನಲ್ಲಿ ಒಳನುಸುಳುಕೋರರು ಪತ್ತೆಯಾದರು.
5 ಮೇ 26ಕ್ಕೆ ಭಾರತೀಯ ವಾಯುಸೇನೆ ದಾಳಿಯನ್ನು ತೀವ್ರಗೊಳಿಸಿತು. ಪಾಕ್‌ ನುಸುಳುಕೋರರ ನಾಶ ಆರಂಭ.
6 ಜೂ. 6ರಂದು ಭಾರತೀಯ ಸೇನೆ ಬಟಾಲಿಕ್‌ ವಲಯದಲ್ಲಿದ್ದ ಎರಡು ಮುಖ್ಯ ಪ್ರದೇಶಗಳನ್ನು ವಶಪಡಿಸಿಕೊಂಡಿತು. ಜೂ.13ಕ್ಕೆ ತೊಲೊಲಿಂಗ್‌ ವಶವಾಯಿತು.
7 ಜು. 4ರಂದು ಭಾರತದ ಮೂರು ಸೇನಾಪಡೆಗಳಾದ ಸಿಖ್‌, ಗ್ರೆನೇಡಿಯರ್ಸ್‌, ನಾಗಾಗಳು ಸತತ 12 ಗಂಟೆಗಳ ಕಾಲ ಹೋರಾಟ ನಡೆಸಿ, ಟೈಗರ್‌ ಹಿಲ್‌ ಅನ್ನು ವಶಪಡಿಸಿಕೊಂಡವು. ಈ ಹೋರಾಟದಲ್ಲಿ ಪಾಕ್‌ನ 10 ಹತ್ತು ಸೈನಿಕರು ಸಾವನ್ನಪ್ಪಿದರು. ಭಾರತದ ಐವರು ಹುತಾತ್ಮರಾದರು.
8 ಜು. 5ರಂದು ಪಾಕಿಸ್ಥಾನ ಪ್ರಧಾನಿ ನವಾಜ್‌ ಷರೀಫ್ ತಮ್ಮ ಸೇನೆಗೆ ಹಿಂತಿರುಗಿ ಬರಲು ಆದೇಶ ನೀಡಿದರು. ಭಾರತ ಗಡಿ ನಿಯಂತ್ರಣ ರೇಖೆಯನ್ನು ಪೂರ್ಣವಾಗಿ ಮರುವಶ ಮಾಡಿಕೊಳ್ಳುವ ಯತ್ನಕ್ಕೆ ಚಾಲನೆ ನೀಡಿತು.
9 ಜು. 26ಕ್ಕೆ ಕಾರ್ಗಿಲ್‌ ಯುದ್ಧ ಅಧಿಕೃತವಾಗಿ ಮುಗಿಯಿತು. ಭಾರತ ವಿಜಯೋತ್ಸವ ಆಚರಿಸಿತು. ಪಾಕಿಸ್ಥಾನಕ್ಕೆ ಮುಖಭಂಗ.
10 ಯುದ್ಧದಲ್ಲಿ ಭಾರತೀಯ ಯೋಧರು, ಸೇನಾಧಿಕಾರಿ ಗಳು ಸೇರಿ ಒಟ್ಟು 450ಕ್ಕೂ ಅಧಿಕ ಮಂದಿ ಹುತಾತ್ಮ ರಾದರು. ಒಟ್ಟಾರೆ 13,000 ಮಂದಿಗೆ ತೀವ್ರ ಗಾಯಗಳಾದವು.
11 ಪಾಕಿಸ್ಥಾನದ 5,000 ಸೈನಿಕರು ಕಾರ್ಗಿಲ್‌ನ ವಿವಿಧ ಭಾಗಗಳಿಗೆ ಪ್ರವೇಶಿಸಿದ್ದರು ಎನ್ನಲಾಗಿದೆ. ಅಂದಾಜು 696 ಪಾಕ್‌ ಸೈನಿಕರು ಜೀವ ಕಳೆದುಕೊಂಡರು.

ಮರೆಯಲಾಗದ ಮಹಾತ್ಮರು
ಕಾರ್ಗಿಲ್‌ ಯುದ್ಧದಲ್ಲಿ ಮೃತಪಟ್ಟ ಭಾರತೀಯ ಯೋಧರೆಲ್ಲರೂ ಅಸಾಮಾನ್ಯ ತ್ಯಾಗಿಗಳೇ. ಈ ಪೈಕಿ ಐವರು ವೀರರ ಸ್ಮರಣೆಯನ್ನು ಇಲ್ಲಿ ಮಾಡಿಕೊಳ್ಳಲಾಗಿದೆ.

ಕ್ಯಾ| ವಿಕ್ರಮ್‌ ಬಾತ್ರಾ, 13 ಜಮ್ಮುಕಾಶ್ಮೀರ ರೈಫ‌ಲ್ಸ್‌
ಕ್ಯಾ| ವಿಕ್ರಮ್‌ ಬಾತ್ರಾ ಹುತಾತ್ಮರಾದಾಗ ಅವರ ವಯಸ್ಸು ಕೇವಲ 24! ದ್ರಾಸ್‌ ಉಪವಲಯ ದಲ್ಲಿ ಬರುವ ಎತ್ತರದ ಪರ್ವತ ಪ್ರದೇಶ ಪಾಯಿಂಟ್‌ 4875 ಅನ್ನು ಪಾಕ್‌ ಸೇನೆಯ ನಿಯಂತ್ರಣದಿಂದ ಬಿಡಿಸಲು ಅವರು ತಮ್ಮ ತಂಡವನ್ನು ಒಯ್ದಿದ್ದರು. ಆ ವೇಳೆ ಅವರಿಗೆ ವಿಪರೀತ ಜ್ವರ. ಇಂತಹ ಹೊತ್ತಿನಲ್ಲಿ ಅವರು ಮೇಲೇರಿ ಶತ್ರುಗಳ ಮಷಿನ್‌ ಗನ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಅವರು ತಮ್ಮ ಸಹ ಅಧಿಕಾರಿಯೊಬ್ಬರನ್ನು ರಕ್ಷಿಸಲು ಹೋಗಿ ಹುತಾತ್ಮರಾದರು. ಇವರಿಗೆ ಮರಣೋತ್ತರ ಪರಮವೀರ ಚಕ್ರ ನೀಡಲಾಗಿದೆ.

ಲೆ| ಬಲ್ವಾನ್‌ ಸಿಂಗ್‌ (18 ಗ್ರೆನೇಡಿಯರ್ಸ್‌)
ಕಾರ್ಗಿಲ್‌ ಯುದ್ಧದಲ್ಲಿ ನಿರ್ಣಾಯಕವಾಗಿದ್ದು ಟೈಗರ್‌ ಹಿಲ್‌. ಅದನ್ನು ವಶಪಡಿಸಿಕೊಂಡಾಗಲೇ ಭಾರತದ ಗೆಲುವು ಅಧಿಕೃತ ವಾಗಿ ನಿರ್ಣಯವಾಗಿದ್ದು. ಇದಾದ ಮೇಲೆ ಪಾಕ್‌ ಸೇನೆ ಹಿಮ್ಮೆಟ್ಟಲಾರಂಭಿಸಿತ್ತು. ಇಂತಹ ಪಡೆಯನ್ನು ನಡೆಸಿದ್ದು ಲೆ| ಬಲ್ವಾನ್‌ ಸಿಂಗ್‌. ಅವರು ತಮ್ಮ “ಘಾತಕ್‌ ಪ್ಲಟೂನ್‌’ ತಂಡದೊಂದಿಗೆ ಸತತ 12 ಗಂಟೆ ನಡೆದು ಪರ್ವತದ ತುದಿಯನ್ನೇರಿದರು. ತಾವೇ 4 ಪಾಕ್‌ ಸೈನಿಕರನ್ನು ಕೊಂದರು. ಹೋರಾಟದಲ್ಲಿ ಗಂಭೀರ ಗಾಯಗೊಂಡರೂ ಟೈಗರ್‌ ಹಿಲ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಅವರಿಗೆ ಮಹಾವೀರ ಚಕ್ರ ನೀಡಲಾಯಿತು.

ಯೋಗೇಂದ್ರ ಸಿಂಗ್‌ ಯಾದವ್‌ (18 ಗ್ರೆನೇಡಿಯರ್ಸ್‌)
ಆಗ ಯೋಗೇಂದ್ರ ಸಿಂಗ್‌ಗೆ ಕೇವಲ 19 ವರ್ಷ. ಜು.4, 1999ರಂದು ಟೈಗರ್‌ ಹಿಲ್‌ ವಶಪಡಿಸಿಕೊಳ್ಳುವ ಹಂತದಲ್ಲಿ 15 ಗುಂಡೇಟು ತಗು ಲಿಯೂ ಬದುಕುಳಿದರು! ತಾವೊಬ್ಬರೇ 4 ಶತ್ರು ಸೈನಿಕರನ್ನು ನಾಶ ಮಾಡಿದರು. ಈ ವೇಳೆ ಅವರ ಎಡಗೈ ಸಂಪೂರ್ಣ ನಿಷ್ಕ್ರಿಯವಾಗಿತ್ತು. ಆಗ ತಮ್ಮ ಕೈಗೆ ಬೆಲ್ಟ್ ಕಟ್ಟಿಕೊಂಡು ದಾಳಿ ಮುಂದುವರಿಸಿದರು. ಪರಿಣಾಮ ಪಾಕ್‌ ಸೈನಿಕರು ಪರಾರಿಯಾದರು. ಚಿಕ್ಕ ವಯಸ್ಸಲ್ಲಿ ಪರಮವೀರ ಚಕ್ರ ಪಡೆದ ವ್ಯಕ್ತಿ ಎಂಬ ದಾಖಲೆ ಬರೆದರು.

ಮೇ| ರಾಜೇಶ್‌ ಅಧಿಕಾರಿ (18 ಗ್ರೆನೇಡಿಯರ್ಸ್‌)
ಮೇಜರ್‌ ರಾಜೇಶ್‌ ಅಧಿಕಾರಿ ಯೋಧರ ಪಡೆಯೊಂದನ್ನು ಕಟ್ಟಿಕೊಂಡು 16,000 ಅಡಿ ಎತ್ತರದಲ್ಲಿ ತೊಲೊಲಿಂಗ್‌ನಲ್ಲಿದ್ದ ಬಂಕರ್‌ ಒಂದನ್ನು ವಶಕ್ಕೆ ಪಡೆಯಬೇಕಿತ್ತು. ಆಗವರು ಪಾಕ್‌ ಸೈನಿಕರೊಂದಿಗೆ ನೇರಾನೇರ ಕದನಕ್ಕಿಳಿದರು. ಗಂಭೀರ ಗಾಯ ಗೊಂಡ ಅವರು ಮೇ 15ರಂದು ಮರಣವನ್ನಪ್ಪಿದರು. ಮೃತ ದೇಹ ಸಿಕ್ಕಿದ್ದು 13 ದಿನಗಳ ಅನಂತರ! ಅವರಿಗೆ ಮರಣೋತ್ತರ ಮಹಾವೀರ ಚಕ್ರ ಪ್ರಶಸ್ತಿ ನೀಡಲಾಯಿತು.

ಮೇಜರ್‌ ವಿವೇಕ್‌ ಗುಪ್ತಾ (2 ಆರ್‌ಆರ್‌)
ಮೇ| ವಿವೇಕ್‌ ಗುಪ್ತಾ ಮುಂದೆ ದ್ರಾಸ್‌ನಲ್ಲಿದ್ದ ಪಾಕ್‌ ಸೈನಿಕರನ್ನು ಹೊಡೆದೋಡಿಸುವ ಸವಾಲಿತ್ತು. ಈ ಹೋರಾಟದಲ್ಲಿ 2 ಬಂಕರ್‌ಗಳನ್ನು ಪಾಕ್‌ ಹಿಡಿತದಿಂದ ಪಾರು ಮಾಡಿದರು. ಆಗ ಗುಂಡುಗಳು ಅವರ ಹೊಟ್ಟೆಯೊಳಗಿನಿಂದ ತೂರಿ ಹೋದವು. ಅವರ ಶರೀರ ಸತತ 2 ದಿನ ಹಾಗೇ ಬಿದ್ದುಕೊಂಡಿತ್ತು. ಇವರಿಗೆ ಮರಣೋತ್ತರ ಮಹಾವೀರ ಚಕ್ರ ಪ್ರಶಸ್ತಿ ನೀಡಲಾಯಿತು.

Leave a Comment

Your email address will not be published. Required fields are marked *