ಸಮಗ್ರ ನ್ಯೂಸ್: ಬಿಜೆಪಿ ಯುವಮೋರ್ಚಾ ಹಾಗೂ ಹಿಂದೂ ಸಂಘಟನೆಗಳ ಮುಖಂಡ ಪ್ರವೀಣ್ ನೆಟ್ಟಾರು(32) ಮೇಲೆ ತಲವಾರು ದಾಳಿ ನಡೆಸಿ ಹತ್ಯೆ ಮಾಡಲಾಗಿದ್ದು, ಈ ಹತ್ಯೆ ಕಳೆದ ವಾರ ಕಳಂಜ ಎಂಬಲ್ಲಿ ನಡೆದ ಮುಸ್ಲಿಂ ಯುವಕನ ಕೊಲೆಗೆ ಪ್ರತಿಕಾರವೇ? ಕುರಿತ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಚಿಕನ್ ಅಂಗಡಿಯ ಮಾಲಕರಾಗಿದ್ದು, ಇವರು ಅಂಗಡಿಯಲ್ಲಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ. ಬೈಕ್ ಕೇರಳ ನೋಂದಣಿಯದ್ದು ಎಂಬ ಶಂಕೆ ವ್ಯಕ್ತವಾಗಿದೆ.
ಮಾರಣಾಂತಿಕ ಹಲ್ಲೆ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ಪ್ರವೀಣ್ ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ.
ಸಾಮಾಜಿಕ ಕ್ಷೇತ್ರ, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಪ್ರವೀಣ್ ನೆಟ್ಟಾರು ಅವರಿಗೆ ಕಳೆದ ವರ್ಷ ಮದುವೆಯಾಗಿದ್ದು, ಪುಟ್ಟ ಮಗುವೊಂದಿದೆ. ಯಾರದ್ದೋ ದ್ವೇಷದ ಜ್ವಾಲೆಗೆ ನೆಮ್ಮದಿಯಿಂದ ಇದ್ದ ಕುಟುಂಬವೊಂದು ಬಲಿಯಾಗಿದೆ.
ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಇದು ಮೂರನೇ ಕೊಲೆ ಪ್ರಕರಣವಾಗಿದ್ದು, ದಾಳಿಯ ಉದ್ದೇಶ ಏನು ಎಂಬುದು ತಿಳಿದು ಬರಬೇಕಿದೆ. ಕಳೆದ ವಾರ ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಳಂಜದಲ್ಲಿ ಮಸೂದ್ ಎಂಬ ಮುಸ್ಲಿಂ ಯುವಕ ಹಿಂದೂ ಯುವಕರಿಂದ ಕ್ಷುಲ್ಲಕ ಕಾರಣಕ್ಕೆ ಕೊಲೆಯಾಗಿದ್ದ. ಈ ಘಟನೆ ಮುನ್ನವೇ ಮತ್ತೊಂದು ಕೊಲೆ ನಡೆದಿದ್ದು, ವ್ಯವಸ್ಥಿತ ಷಡ್ಯಂತ್ರಗಳು ಮತ್ತು ಜಿಹಾದಿಗಳ ಕೈವಾಡ ಇದರ ಹಿಂದೆ ಇದೆ ಎಂದು ಹೇಳಲಾಗುತ್ತಿದೆ.
ಪೊಲೀಸರ ತನಿಖೆಯಿಂದಷ್ಟೆ ಖಚಿತ ಮಾಹಿತಿ ತಿಳಿದುಬರಬೇಕಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೋಲಿಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಬೆಳ್ಳಾರೆ ಹಾಗೂ ಸುಳ್ಯ ಪರಿಸರದ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದು ಬಂದೋಬಸ್ತ್ ಕ್ರಮ ಕೈಗೊಂಡಿದ್ದಾರೆ.