Ad Widget .

ಕೊಡಗಿನಲ್ಲಿ ಪದೇಪದೇ ಭೂಕಂಪ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ಪದೇ ಪದೇ ಭೂ ಕುಸಿತ ಮತ್ತು ಭೂಕಂಪ ಆಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನರು ಸಹಜವಾಗಿಯೇ ಭಯಭೀತರಾಗಿದ್ದಾರೆ. ಆದರೆ ಅದಕ್ಕೆ ನಿಖರ ಕಾರಣವನ್ನು ಪತ್ತೆ ಹಚ್ಚಲು ಸರ್ಕಾರ ಈವರೆಗೆ ಮುಂದಾಗಿಲ್ಲ. ಹಾಗಾಗಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಗೀತಾಮಿಶ್ರಾ ಆ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದು, ಪಿಐಎಲ್‌ ಅರ್ಜಿಯನ್ನು ಆಲಿಸಿದ ಹಂಗಾಮಿ ಸಿಜೆ ಅಲೋಕ್‌ ಅರಾಧೆ ಅವರಿದ್ದ ವಿಭಾಗೀಯಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

Ad Widget . Ad Widget .

ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆಸಲು ವಿಶೇಷ ತಂಡ ರಚನೆಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಆ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ಮೂರು ವಾರಗಳಲ್ಲಿ ಅಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿತು.

Ad Widget . Ad Widget .

ಅಲ್ಲದೆ, ಕೊಡಗಿನ ಸಮಸ್ಯೆ ಬಗೆಹರಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಸರಕಾರ ವಿವರ ನೀಡಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಿತು.

ಕೊಡಗಿನಲ್ಲಿ ಮತ್ತೆ ಮತ್ತೆ ಭೂ ಕುಸಿತ ಸಂಭವಿಸುತ್ತಿರುವುದರಿಂದ ಸಹಸ್ರಾರು ಮಂದಿಗೆ ತೊಂದರೆ ಆಗುತ್ತಿದೆ, ಇಡೀ ಜಿಲ್ಲೆಯ ಪರಿಸರದ ಮೇಲೂ ಪರಿಣಾಮಗಳಾಗುತ್ತಿವೆ. ಆದರೂ ಸರಕಾರ ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ಅರಿಯಲು ಮುಂದಾಗಿಲ್ಲ. ಹಾಗಾಗಿ ಸರಕಾರಕ್ಕೆ ಅಗತ್ಯ ಸೂಚನೆಗಳನ್ನು ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಅರ್ಜಿದಾರರ ಪರ ವಾದಿಸಿದ ವಕೀಲರು, 2018ರಲ್ಲಿ ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ವ್ಯಾಪಕ ಪ್ರಾಣ ಮತ್ತು ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿತು. ಆದಾದ ನಂತರ ಪ್ರತಿವರ್ಷವೂ ಜಿಲ್ಲೆಯಾದ್ಯಂತ ಭೂ ಕುಸಿತ ಮತ್ತು ಕಂಪನಗಳು ಹೆಚ್ಚಾಗುತ್ತಿದೆ, ಜೀವ ಹಾಗೂ ಆಸ್ತಿ-ಪಾಸ್ತಿ ಹಾನಿ ಪ್ರತಿವರ್ಷವೂ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ, ಕೊಡಗು ಜಿಲ್ಲೆಯಲ್ಲಿ ಹಾನಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ 2020ರಲ್ಲಿಯೇ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಏನೂ ಕ್ರಮ ಕೈಗೊಂಡಿಲ್ಲ ಎಂದರು.

Leave a Comment

Your email address will not be published. Required fields are marked *