ಸಮಗ್ರ ನ್ಯೂಸ್: ಆಗಸ್ಟ್ 13-15ರವರೆಗೆ ಪ್ರತಿ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಅಥವಾ ತ್ರಿವರ್ಣ ಧ್ವಜವನ್ನು ಪ್ರದರ್ಶಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕೈಜೋಡಿಸಿ ಎಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕರೆ ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಮೋದಿ, 1947 ಜುಲೈ 22ಕ್ಕೆ ರಾಷ್ಟ್ರಧ್ವಜವನ್ನು ಅಳವಡಿಸಿಕೊಳ್ಳಲಾಯಿತು ಎಂದಿದ್ದಾರೆ. ವಸಾಹತುಶಾಹಿ ಆಡಳಿತ ವಿರುದ್ಧ ನಾವು ಹೋರಾಡುತ್ತಿದಾಗ ಸ್ವತಂತ್ರ ಭಾರತಕ್ಕೊಂದು ಧ್ವಜ ಬೇಕು ಎಂದು ಕನಸು ಕಂಡು ಅದಕ್ಕಾಗಿ ಪ್ರಯತ್ನಿಸಿದ, ಆ ಧೈರ್ಯವನ್ನು ನಾವು ಇಂದು ನೆನಸಿಕೊಳ್ಳುತ್ತಿದ್ದೇವೆ. ನಾವು ಅವರು ಕಂಡ ಕನಸಿನ ಭಾರತವನ್ನು ಸಾಕಾರಗೊಳಿಸಲು ಬದ್ಧರಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಈ ವರ್ಷ ನಾವು ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸುತ್ತಿದ್ದೇವೆ.
ಹರ್ ಘರ್ ತಿರಂಗಾ ಅಭಿಯಾನವನ್ನು ಬಲಪಡಿಸೋಣ. ಆಗಸ್ಟ್ 13ರಿಂದ 15ರವರೆಗೆ ನಿಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಅಥವಾ ಪ್ರದರ್ಶಿಸಿ. ಇದು ನಮ್ಮ ರಾಷ್ಟ್ರಧ್ವಜದೊಂದಿಗೆ ಇರುವ ಸಂಬಂಧವನ್ನು ಗಟ್ಟಿಗೊಳಿಸಿತ್ತದೆ ಎಂದು ಟ್ವೀಟ್ನಲ್ಲಿ ಮೋದಿ ಹೇಳಿದ್ದಾರೆ.