ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ರಾಮಕೊಲ್ಲಿಯಲ್ಲಿ ಜುಲೈ 18 ರಂದು ಜಲಸ್ಫೋಟ ಆಗಿದ್ದು ಇದೀಗ ಇದೇ ಬೆಟ್ಟ ಸಂಪೂರ್ಣ ಕುಸಿಯುವ ಆತಂಕ ಎದುರಾಗಿದೆ.
ರಾಮಕೊಲ್ಲಿಯ ಮೇಲ್ಭಾಗದಲ್ಲಿರುವ ಕಡ್ಯದ ಮನೆಯ ಮೇಲ್ಭಾಗದಲ್ಲಿ ಜಲಸ್ಫೋಟ ಆಗಿದ್ದರಿಂದ ಐದು ಕಿಲೋಮೀಟರ್ ದೂರದ ಕೆಳಭಾಗದಲ್ಲಿರುವ ರಾಮಕೊಲ್ಲಿಯ ಸೇತುವೆ ಕೊಚ್ಚಿಹೋಗಿತ್ತು. ಮೇಲ್ಭಾಗದಿಂದ ನೂರಾರು ಮರ, ಗಿಡ ಮತ್ತು ಬಂಡೆಗಳ ಸಮೇತ ಎಲ್ಲವೂ ತರಗೆಲೆಯಂತೆ ಕೊಚ್ಚಿಹೋಗಿದ್ದವು. ಇದನ್ನು ಕಂಡಿದ್ದ ರಾಮಕೊಲ್ಲಿಯ ಜನತೆ ಬೆಚ್ಚಿಬಿದ್ದಿದ್ದರು.
ಆದರೆ ಈಗ ರಾಮಕೊಲ್ಲಿಯ ಮೇಲ್ಭಾಗದಲ್ಲಿರುವ ಬೆಟ್ಟದ ಬರೋಬ್ಬರಿ 25 ಎಕರೆಯಷ್ಟು ಪ್ರದೇಶ ಬಿರುಕು ಬಿಟ್ಟು, ಐದಡಿ ಆಳಕ್ಕೆ ಕುಸಿದು ನಿಂತಿದೆ. ಈ ಬಿರುಕು ರಾಮಕೊಲ್ಲಿ, ಕಡ್ಯದ ಮನೆ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ 100 ಕ್ಕೂ ಹೆಚ್ಚು ಕುಟುಂಬಗಳ ನಿದ್ದಿಗೆಡಿಸಿದೆ.
ಬಿರುಕು ಬಿಟ್ಟಿರುವ ಬೆಟ್ಟದ ತಳಭಾಗದಲ್ಲಿ ಪದೇ ಪದೇ ಜಲಸ್ಫೋಟವಾಗುತ್ತಿದೆ. ಭಾರೀ ಶಬ್ಧದೊಂದಿಗೆ ಜಲಸ್ಫೋಟ ಆದಂತೆಲ್ಲಾ ದೊಡ್ಡ ಪ್ರಮಾಣದಲ್ಲಿ ಕೆಸರು ಮಿಶ್ರಿತ ನೀರು ರಭಸವಾಗಿ ಹರಿಯುತ್ತಿದೆ. ಬುಧವಾರ(ಜು.20) ಸಂಜೆ ಆರುವರೆ ಗಂಟೆ ಸಮಯದಲ್ಲೂ ಭಾರಿ ಶಬ್ಧದೊಂದಿಗೆ ಜಲಸ್ಫೋಟವಾಗಿದೆ. ಅದರ ರಭಸಕ್ಕೆ ಕಡ್ಯದ ಮನೆ, ರಾಮಕೊಲ್ಲಿ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎನ್ನುತ್ತಿದ್ದಾರೆ ಸ್ಥಳೀಯರು.
ಸದ್ಯ ಮೂರು ದಿನಗಳಿಂದ ಮಳೆ ಸಲ್ಪ ಬಿಡುವು ನೀಡಿರುವುದು ಜನರು ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ. ಆದರೆ ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಭೀಕರ ಮಳೆ ಸುರಿಯುವ ಸಾಧ್ಯತೆ ಇದ್ದು, ಒಂದು ವೇಳೆ ಭಾರಿ ಮಳೆ ಸುರಿದರೆ, ಈ ಬಿರುಕುಗಳ ಮೂಲಕ ಬಾರಿ ನೀರು ಭೂಮಿಯೊಡಲು ಸೇರಿ, ಬಿರುಕು ಬಿಟ್ಟು ಸ್ವಲ್ಪ ಕುಸಿದಿರುವ ಇಡೀ ಬೆಟ್ಟವೇ ಕುಸಿಯುವ ಆತಂಕವಿದೆ. ಹಾಗೆಂದು ಬೆಟ್ಟದ ಬಿರುಕು ಮುಚ್ಚಲು ಸಾಧ್ಯವಿಲ್ಲ.
ಇವು ಭೂಮಿ ಮೇಲೆ ಬಿರುಕು ಕಾಣಿಸುತ್ತಿರುವ ಬಿರುಕುಗಳಾದರೆ, ಭೂಮಿ ಆಳದಲ್ಲಿ ಎಷ್ಟು ಬಿರುಕುಗಳು ಇವೆಯೋ ಗೊತ್ತಿಲ್ಲ. ಹಾಗೇನಾದರು ಬೆಟ್ಟ ಕುಸಿದಿದ್ದೆ ಆದಲ್ಲಿ ಅದರಿಂದಾಗುವ ಅಪಾಯ ಊಹಿಸುವುದಕ್ಕೂ ಅಸಾಧ್ಯ. ಅದರಿಂದ ಕಡ್ಯದ ಮನೆ, ರಾಮಕೊಲ್ಲಿಯಲ್ಲಿರುವ ಮನೆಗಳು ಕಣ್ಮರೆಯಾಗಿಬಿಡುವ ಆತಂಕವಿದೆ. ಹೀಗಾಗಿ ಜನರು ನಮಗೆ ಎರಡು ತಿಂಗಳ ಮಟ್ಟಿಗಾದರೂ ಸರ್ಕಾರ ಮನೆ ಬಾಡಿಗೆ ಕೊಟ್ಟರೆ ನಾವು ಇಲ್ಲಿಂದ ಬೇರೆಡೆ ಹೋಗುತ್ತೇವೆ ಎನ್ನುತ್ತಿದ್ದಾರೆ.
ಸದ್ಯ ಹೆಂಗಸರು ಮಕ್ಕಳನ್ನು ಬೇರೆಡೆಗೆ ಇಲ್ಲಿನ ಜನ ಕಳುಹಿಸಿದ್ದು, ರಾತ್ರಿಯಿಡೀ ನಿದ್ದೆಗೆಟ್ಟು ಉಸಿರು ಹಿಡಿದು ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಮಡಿಕೇರಿಯಲ್ಲಿ ಹಲವು ಪ್ರದೇಶಗಳಲ್ಲಿ ಹಲವು ಬಾರಿ ಭೂಕಂಪದ ಅನುಭವವಾಗಿದ್ದು ಇದು ಇಲ್ಲಿನ ನಿವಾಸಿಗಳಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ.