Ad Widget .

ಉಡುಪಿ: ಶಿರೂರು ಅಂಬ್ಯುಲೆನ್ಸ್ ಅಪಘಾತ ಪ್ರಕರಣ| ನಾಲ್ವರು ಸಾವು; ಹಸುವಿನ ಪ್ರಾಣ ರಕ್ಷಿಸಲು ಹೋಗಿ ನಡೆಯಿತೇ ಅಪಘಾತ?

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್​ವೊಂದು ಟೋಲ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ.

Ad Widget . Ad Widget .

ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿದ್ದ ಆಂಬುಲೆನ್ಸ್​​ವೊಂದು ಟೋಲ್ ಹತ್ತಿರ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.

Ad Widget . Ad Widget .

ಈ ಘಟನೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿದ್ದ ಗಜಾನನ ಲಕ್ಷ್ಮಣ ನಾಯ್ಕ (36), ಜ್ಯೋತಿ ಲೋಕೇಶ್‌ ನಾಯ್ಕ (32), ಲೋಕೇಶ್‌ ಮಾಧವ ನಾಯ್ಕ (38) ಹಾಗೂ ಮಂಜುನಾಥ ನಾಯ್ಕ (42) ಮೃತಪಟ್ಟವರು. ಹೊನ್ನಾವರ ಸಮೀಪದ ಹಡಿನಬಾಳ ನಿವಾಸಿಗಳಾಗಿರುವ ಅವರು ಹೊನ್ನಾವರದ ಖಾಸಗಿ ಆಸ್ಪತ್ರೆಯಿಂದ ಉಡುಪಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು.

ಟೋಲ್‌ ಸಿಬ್ಬಂದಿ ಸಂಬಾಜೆ ಗೋರ್ಪಡೆ (41) ಶಶಾಂಕ್‌, ಗೀತಾ, ಗಣೇಶ, ರೋಶನ್‌ ರಾಡ್ರಿಗಸ್‌ ಗಂಭೀರ ಗಾಯಗೊಂಡಿದ್ದಾರೆ. ಢಿಕ್ಕಿ ಹೊಡೆದ ರಭಸಕ್ಕೆ ಆಯಂಬುಲೆನ್ಸ್‌ನಲ್ಲಿದ್ದವರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಚಾಲಕ ವಾಹನದಡಿಯಲ್ಲಿ ಸಿಲುಕಿದ್ದ.

ಇನ್ನು ಈ ದುರ್ಘಟನೆಯ ಭೀಕರ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಘಟನೆಯ ಸಂಬಂಧ ಬೈಂದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತಕ್ಕೆ ಕಾರಣವೇನು? ಶಿರೂರು ಟೋಲ್‌ಗೇಟ್‌ನಲ್ಲಿ ಅಂಬ್ಯುಲೆನ್ಸ್‌ ಸಂಚಾರಕ್ಕೆ ಪ್ರತ್ಯೇಕ ಮಾರ್ಗ ಇದ್ದು, ಸೈರನ್‌ ಕೇಳಿದ ತಕ್ಷಣ ಆ ಮಾರ್ಗದ ಬ್ಯಾರಿಕೇಡ್‌ಗಳನ್ನು ತೆಗೆದು ಟೋಲ್‌ ಮುಕ್ತ ಮಾಡಿ ದಾರಿ ಬಿಡಲಾಗುತ್ತದೆ. ಬುಧವಾರ ಸಂಜೆ ಕೂಡ ಆಯಂಬುಲೆನ್ಸ್‌ ವೇಗವಾಗಿ ಬಂದಿದೆ. ಆಗ ಸಣ್ಣದಾಗಿ ಮಳೆ ಸುರಿಯುತ್ತಿತ್ತು. ಗೇಟ್‌ ಸಿಬ್ಬಂದಿ ತರಾತುರಿಯಲ್ಲಿ ಬ್ಯಾರಿಕೇಡ್‌ ತೆರವು ಮಾಡಿದರು. ಇದೇ ವೇಳೆಗೆ ಎದುರುಗಡೆ ಮಲಗಿದ್ದ ದನವೊಂದನ್ನು ಕಂಡು ಚಾಲಕ ಗೊಂದಲದಿಂದ ಬ್ರೇಕ್‌ ಹಾಕುವಂತಾಯಿತು. ಕಾಂಕ್ರೀಟ್‌ ರಸ್ತೆಯಾಗಿರುವ ಕಾರಣ ಆಯಂಬುಲೆನ್ಸ್‌ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಯಿತು.

ಲೋಕೇಶ ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದು ಅಪಘಾತದಿಂದ ಕುಟುಂಬದವರಿಗೆ ಸಿಡಿಲು ಬಡಿದಂತಾಗಿದೆ. ಟೋಲ್‌ ಸಿಬ್ಬಂದಿ ಮತ್ತು ಸ್ಥಳೀಯರು ಉರುಳಿಬಿದ್ದ ಆಯಂಬುಲೆನ್ಸನ್ನು ಮೇಲಕ್ಕೆತ್ತಿ ಶಿರೂರು ಅಸೋಸಿಯೇಶನ್‌ ಆಯಂಬುಲೆನ್ಸ್‌ ಮೂಲಕ ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.

ಹಡಿನಬಾಳ ಗ್ರಾಮದ ಹಾಡಗೆರೆ ಮನೆಯವರಾದ ಲೋಕೇಶ್‌ ಮಾದೇವ ನಾಯ್ಕ ಕೂಲಿ ಮಾಡಿ ಬದುಕುವ ಬಡ ಕುಟುಂಬದವರಾಗಿದ್ದಾರೆ. ಬುಧವಾರ ಅಪರಾಹ್ನದ ವೇಳೆಗೆ ಅವರು ರಕ್ತದೊತ್ತಡ (ಬಿಪಿ) ಕಡಿಮೆಯಾಗಿ ಅಸ್ವಸ್ಥರಾದರು. ತತ್‌ಕ್ಷಣ ಪತ್ನಿ, ಸಂಬಂಧಿಗಳಾದ ಕವಲಕ್ಕಿಯಲ್ಲಿ ಗೋಬಿ ಅಂಗಡಿ ನಡೆಸುತ್ತಿರುವ ಮಂಜುನಾಥ ನಾಯ್ಕ (ಗೋಬಿ ಮಂಜು) ಮತ್ತು ಗಜಾನನ ಅವರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಆಯಂಬುಲೆನ್ಸ್‌ ಮೂಲಕ ಉಡುಪಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲಿ ಅಪಘಾತ ಸಂಭವಿಸಿದೆ.

Leave a Comment

Your email address will not be published. Required fields are marked *