Ad Widget .

ಪಶ್ಚಿಮ ಘಟ್ಟಗಳ ಉಳಿವಿಗೆ ಕಸ್ತೂರಿ‌ ರಂಗನ್ ವರದಿ ಜಾರಿ| ಜನ ಯಾಕಿಷ್ಟು ಭಯ ಪಡ್ತಾರೆ ಗೊತ್ತಾ? ಅಂಥಾದ್ದೇನಿದೆ ಈ ವರದಿಯಲ್ಲಿ? ಕಂಪ್ಲೀಟ್ ಸ್ಟೋರಿ…

ಸಮಗ್ರ ನ್ಯೂಸ್: ಪಶ್ಚಿಮ ಘಟ್ಟಗಳು ಭಾರತೀಯ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ಹಬ್ಬಿದ ಪರ್ವತ ಶ್ರೇಣಿ. ಪಶ್ಚಿಮಘಟ್ಟದ ಶ್ರೇಣಿಯು ಗುಜರಾತ್‌ನಿಂದ ಆರಂಭವಾಗಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯದ ಕನ್ಯಾಕುಮಾರಿವರೆಗೂ ಹಬ್ಬಿದೆ.

Ad Widget . Ad Widget .

ಪಶ್ಚಿಮ ಘಟ್ಟಗಳ ಒಟ್ಟು 1,64,280 ಚ.ಕಿ.ಮೀ. ಪ್ರದೇಶದಲ್ಲಿ ಸುಮಾರು 59.940 ಚ.ಕಿ.ಮೀ ವಿಸ್ತೀರ್ಣ ಪ್ರದೇಶ ಅಂದರೆ ಸುಮಾರು ಶೇಕಡಾ 36.49ರಷ್ಟು ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಪಶ್ಚಿಮ ಘಟ್ಟಗಳ ಈ ಸೂಕ್ಷ್ಮ ಪರಿಸರವು ಅಪರೂಪದ ಪ್ರಾಣಿಗಳು, ಪಕ್ಷಿಗಳು, ಗಿಡಮೂಲಿಕೆಗಳು, ಗಿಡ, ಮರ, ಬಳ್ಳಿಗಳು, ಸೂಕ್ಷ್ಮ ಜೀವಿಗಳು, ಸರಿಸೃಪಗಳು, ಜೀವ ನದಿಗಳ ತಾಣ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.

Ad Widget . Ad Widget .

ಇದರಲ್ಲೂ ಮಾನವ ಹಸ್ತಕ್ಷೇಪ ಮಾಡುತ್ತಿರುವುದರಿಂದ ಪರಿಸರಕ್ಕೆ ಧಕ್ಕೆ ಆಗುತ್ತಿದೆ, ಆ ಮೂಲಕ ಜೀವ ಸಂಕುಲಕ್ಕೆ ಅಪಾಯ ಎದುರಾಗಲಿದೆ ಎನ್ನುವುದು ಪರಿಸರ ತಜ್ಞರ, ಜೀವ ವಿಜ್ಞಾನಿಗಳ ಆತಂಕ. ಇದಕ್ಕಾಗಿ ಕಸ್ತೂರಿ ರಂಗನ್‌ ವರದಿ ತಯಾರಾಗಿದೆ. ಆದರೆ ಈ ವರದಿಗೆ ಇದೀಗ ಭಾರೀ ವಿರೋಧ ವ್ಯಕ್ತವಾಗಿದೆ. ಹಾಗಾದರೆ ಏನಿದು ಕಸ್ತೂರಿ ರಂಗನ್ ವರದಿ? ಈ ವರದಿಯಲ್ಲಿ ಏನಿದೆ? ಇದಕ್ಕೆ ಯಾಕಿಷ್ಟು ವಿರೋಧ ವ್ಯಕ್ತವಾಗಿದೆ? ಅಷ್ಟಕ್ಕೂ ಕಸ್ತೂರಿ ರಂಗನ್ ಎಂದರೆ ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಯಾರು ಈ ಕಸ್ತೂರಿ ರಂಗನ್?
ಕೇರಳ ಮೂಲದ ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ 1994 ರಿಂದ 2003ರವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅಧ್ಯಕ್ಷರಾಗಿದ್ದವರು. ಭಾರತೀಯ ಬಾಹ್ಯಾಕಾಶ ವಿಜ್ಞಾನಿಯಾದ ಇವರು, 2003ರಿಂದ 2009ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. ಬಳಿಕ ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾದರು. ಬಳಿಕ ಕಸ್ತೂರಿ ರಂಗನ್ ಸಮಿತಿಯ ಅಧ್ಯಕ್ಷರಾದರು.

ಕಸ್ತೂರಿ ರಂಗನ್ ಸಮಿತಿ:
ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ಉದ್ದೇಶದಿಂದ, ಅದರ ಬಗೆಗೆ ಪರಿಸರ ತಜ್ಞ ಮಾಧವ ಗಾಡ್ಗಿಲ್ ಎಂಬುವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಒಂದು ಸಮಿತಿಯನ್ನು ರಚಿಸಿತ್ತು. ಅವರು 2011ರ ಆಗಸ್ಟ್ 31ರಂದು ಸರ್ಕಾರಕ್ಕೆ ತಮ್ಮ ವರದಿ ಸಲ್ಲಿಸಿದ್ದರು.

ಮಾಧವ ಗಾಡ್ಗಿಲ್ ವರದಿಯಲ್ಲಿ ಏನಿತ್ತು?
ಗಾಡ್ಗಿಲ್ ವರದಿಯಲ್ಲಿ ಶೇ. 94ರಿಂದ 97% ಪಶ್ಚಿಮ ಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಬೇಕೆಂದೂ ಮತ್ತು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳವಾಗ ಅದು ಅಲ್ಲಿಯ ಪರಿಸರವನ್ನು ಜೀವ ವೈವಿಧ್ಯತೆಯ ಕ್ರಮವನ್ನು ಕೆಡಿಸದಿರುವ ಷರತ್ತಿನ ಮೇಲೆ ಅನುಮತಿ ನೀಡಬೇಕೆಂದು ಶಿಪಾರಸು ಮಾಡಿತು. ಈ ಭಾಗದಲ್ಲಿ ಬಹಳಷ್ಟು ತೋಟಗಳೂ, ವಸತಿ ಪ್ರದೇಶಗಳೂ, ಕೃಷಿ ಪ್ರದೇಶವೂ ಸೇರಿತ್ತು. ಇದರಲ್ಲಿ ಆ ಪ್ರದೇಶದ ಮುಕ್ಕಾಲು ಭಾಗವನ್ನು ನಿರ್ಬಂಧಿತ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿತ್ತು. ಆ ಕಮಿಟಿಯ ಆಪ್ರದೇಶದಲ್ಲಿ ಯಾವುದೇ ದೊಡ್ಡ ಹೊಸ ಅಣೆಕಟ್ಟುಗಳನ್ನು ಕಟ್ಟುಬಾರದು, ಈ ಪ್ರದೇಶ ವಿಶೇಷ ರಕ್ಷಣೆ ಮತ್ತು ಅದರ ಭೂಲಕ್ಷಣ, ವನ್ಯಜೀವಿಗಳ ಕಾಳಜಿ, ಫಲವತ್ತಾದ ಭೂಮಿಯನ್ನು ಉಳಿಸುವ ಅಗತ್ಯವಿದೆ. ಈ ಪ್ರದೇಶದಲ್ಲಿ, ಕೆಲವು ಐತಿಹಾಸಿಕ ಮೌಲ್ಯಗಳು ಸಹ ಇವೆ ಇತ್ಯಾದಿ ಕಾರಣಗಳನ್ನು ಕೊಟ್ಟಿತ್ತು.

ಗಾಡ್ಗಿಲ್ ಸಮಿತಿ ಬಳಿಕ ಕಸ್ತೂರಿ ರಂಗನ್ ಸಮಿತಿ ರಚನೆ:
ಗಾಡ್ಗಿಲ್ ಸಮಿತಿ ವರದಿಯು ತೀವ್ರ ಟೀಕೆಗೆ ಒಳಗಾಯಿತು. ಗಾಡ್ಗೀಳ್ ಸಮಿತಿ ವರದಿಯ ಕುಂದು ಕೊರತೆಯನ್ನು ನೀಗಿಸಲು ಕಸ್ತೂರಿರಂಗನ್ ಸಮಿತಿಯನ್ನು ನೇಮಿಸಲಾಯಿತು. ಕಸ್ತೂರಿರಂಗನ್ ಸಮಿತಿ ತನ್ನ ವರದಿಯನ್ನು 2013ರ ಏಪ್ರಿಲ್ 15 ರಂದು ಸಲ್ಲಿಸಿತು. ಇತರ 10 ಸದಸ್ಯರ ಸಮಿತಿಯ ಜೊತೆ, ಕೆ.ಕಸ್ತೂರಿರಂಗನ್ ಸಿದ್ಧಪಡಿಸಿದ ಪಶ್ಚಿಮ ಘಟ್ಟಗಳ ಈ ಕಸ್ತೂರಿರಂಗನ್ ವರದಿಯನ್ನು ಸರ್ಕಾರ ಸ್ವೀಕರಿಸಿದೆ.

ಕಸ್ತೂರಿ ರಂಗನ್ ಸಮಿತಿ ವರದಿಯಲ್ಲಿ ಏನಿದೆ?
ಕಸ್ತೂರಿ ರಂಗನ್‍ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಚ,ಕಿ.ವ್ಯಾಪ್ತಿಯ ಪ್ರದೇಶ ಅಂದರೆ ಶೇಕಡಾ 36.4ರಷ್ಚು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಡುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲು ಕ್ವಾರಿ, ಮರಳುಗಾರಿಕೆ ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಬೇಕು. ಎಲ್ಲಾ ರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿಯುತ್ತಿದ್ದಂತೆ ಸ್ಥಗಿತಗೊಳಿಸಬೇಕು. 20,000 ಚ,ಮೀ, ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಇಎಸ್‌ಎನಿಂದ 10ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವುದಿದ್ದರೂ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ.

ಕಸ್ತೂರಿ ರಂಗನ್ ಸಮತಿ ವರದಿಗೆ ಒಳಪಡುವ ಪ್ರದೇಶಗಳು:
ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ಬೆಳಗಾವಿ, ಉತ್ತರಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲ ಪ್ರದೇಶಗಳು ಸೇರಿ ಒಟ್ಟು 56,874 ಚದರ ಕಿಲೋ ಮೀಟರ್‌ ವಿಸ್ತೀರ್ಣದ ಪ್ರದೇಶವನ್ನು ಅತಿ ಸೂಕ್ಷ್ಮ ಪ್ರದೇಶವೆಂದು ಕಸ್ತೂರಿ ರಂಗನ್‌ ಸಮಿತಿ ವರದಿ ನೀಡಿದೆ. ಕರ್ನಾಟಕದಲ್ಲಿ ಪಶ್ಚಿಮಘಟ್ಟ 44,448 ಚ,ಕಿ.ಮೀ. ವಿಸ್ತೀರ್ಣ ಹೊಂದಿದೆ. ಅದರಲ್ಲಿ 20,668 ಚ.ಕಿ.ಮೀ. ಪ್ರದೇಶ ವರದಿ ಪ್ರಕಾರ ಪರಿಸರ ಸೂಕ್ಷ್ಮ ಪ್ರದೇಶದ (ಇಎಸ್ ಎ) ವ್ಯಾಪ್ತಿಯಲ್ಲಿ ಬರುವುದು. ಇದು 1573 ಗ್ರಾಮಗಳನ್ನು ಒಳಗೊಂಡಿದೆ. ರಾಜ್ಯ ಸರ್ಕಾರ ಇದನ್ನು 850 ಗ್ರಾಮಗಳಿಗೆ ಸೀಮಿತಗೊಳಿಸಬೇಕೆಂದು ಕೇಳಿದೆ.

ವರದಿ ಅನುಷ್ಠಾನವಾದರೆ ಏನಾಗಲಿದೆ?
ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ಪಶ್ಚಿಮ ಘಟ್ಟ ಹಾಗೂ ಮಲೆನಾಡು ಅತಿ ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆಯಾಗುತ್ತದೆ. ಇಲ್ಲಿ ಮಾನವ ಹಸ್ತಕ್ಷೇಪವನ್ನು ಮಾಡುವಂತೆಯೇ ಇಲ್ಲ. ಇಡೀ ಭೂ ಭಾಗ ರಾಜ್ಯದ ನಿಯಂತ್ರಣ ಕಳೆದುಕೊಂಡು ಕೇಂದ್ರದ ಸುಪರ್ದಿಗೆ ಬರುತ್ತದೆ. ಇಲ್ಲಿರುವ ಆದಿವಾಸಿಗಳನ್ನು ಒಕ್ಕಲು ಎಬ್ಬಿಸಬೇಕಾಗುತ್ತದೆ. ವಿದ್ಯುತ್, ನೀರಾವರಿ ಸೇರಿದಂತೆ ಯಾವುದೇ ಕೈಗಾರಿಕೆ ನಡೆಸಲು ಕಷ್ಟ ಸಾಧ್ಯವಾಗಲಿದೆ. ಸದ್ಯ ಇರುವ ಕೈಗಾರಿಕೆಗಳನ್ನು 5 ವರ್ಷದೊಳಗೆ ಮುಚ್ಚಬೇಕಾಗುತ್ತದೆ.

ಮಲೆನಾಡು ಜನರ ಆತಂಕವೇನು?
ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಮಳೆ ಬೀಳುವುದರಿಂದ ಪ್ರಮುಖ ಬೆಳೆ ಏಲಕ್ಕಿ, ಕಾಫಿ, ಕಾಳು ಮೆಣಸು, ಅಡಿಕೆ ಬೆಳೆ ಸಂಕಷ್ಟದಲ್ಲಿದ್ದು, ಬಹುತೇಕ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದ್ದು, ರೈತರು ತಾವು ಬೆಳೆದ ಕೃಷಿ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಇದರಿಂದ ಹೊರ ಬರಲು ಕೆಲ ರೈತರು ತಮ್ಮ ಜಮೀನುಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದು ಹೋಂ ಸ್ಟೇಗಳನ್ನು ನಡೆಸಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈ ಭಾಗದಲ್ಲಿ ಅತೀ ಹೆಚ್ಚು ಪ್ರವಾಸಿ ತಾಣ ಇರುವುದರಿಂದ ರೈತರು ಹೋಂ ಸ್ಟೇ ಸ್ಥಾಪಿಸಿದ್ದು, ಇದರಿಂದ ಬರುವ ಆದಾಯದಲ್ಲಿ ತಮ್ಮ ಕೃಷಿ ಜಮೀನಿನ ಕೆಲಸಗಳನ್ನು ಮಾಡಿಸುತ್ತಾರೆ. ಒಂದು ವೇಳೆ ಯೋಜನೆ ಜಾರಿಯಾದರೆ ಲಕ್ಷಾಂತರ ರೂ. ಖರ್ಚು ಮಾಡಿರುವ ತೋಟ, ಹೋಂಸ್ಟೇಗಳನ್ನು ತೆರವುಗೊಳಿಸುವ ಪರಿಸ್ಥಿತಿ ಬಂದು ಸಂಕಷ್ಟದಲ್ಲಿ ಸಿಲುಕಲಿದ್ದಾರೆ.

ಜನರ ಆಗ್ರಹವೇನು?
ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಾರ ರಾಜ್ಯದ 1,553ಕ್ಕೂ ಹೆಚ್ಚು ಹಳ್ಳಿಗಳು ಈ ವ್ಯಾಪ್ತಿಗೆ ಬರುತ್ತದೆ. ಆದರೆ, ಕೇಂದ್ರ ಸರ್ಕಾರದ ಮೊದಲ ಎರಡು ಬಾರಿಯ ಅಧಿಸೂಚನೆಯಲ್ಲಿ ಕೇರಳ ರಾಜ್ಯವೂ ಇತ್ತು. ಆದರೆ ಮೂರನೇ ಬಾರಿ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇರಳದ ಹೆಸರೇ ಇಲ್ಲವಾಗಿದೆ. ಹೀಗಾಗಿ, ಕರ್ನಾಟಕ ಸರ್ಕಾರವೂ ನಕ್ಷೆ ಸಹಿತವಾಗಿ ವಾದ ಮಂಡಿಸಬೇಕು, ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಲಾಗುತ್ತಿದೆ.

ಪರಿಸರ ತಜ್ಞರು ಹೇಳುವುದೇನು?
ಪಶ್ಟಿಮಘಟ್ಟ ಹಾಗೂ ಮಲೆನಾಡು ಭಾಗ ವಿವಿಧ ಯೋಜನೆಗಳಿಂದ ವೇಗವಾಗಿ ನಶಿಸುತ್ತಿದೆ. ಹೀಗಾಗಿ ಅದನ್ನು ಉಳಿಸಲು ಕಸ್ತೂರಿ ರಂಗನ್ ವರದಿ ಅನುಷ್ಠಾನವೊಂದೇ ದಾರಿ ಅನ್ನೋದು ಪರಿಸರ ಪ್ರೇಮಿಗಳು, ಪರಿಸರ ತಜ್ಞರ ವಾದ.

ಸರ್ಕಾರ ಹೇಳುತ್ತಿರುವುದೇನು?
ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ನಿನ್ನೆ (ಜು.18) ರಾಜ್ಯ ಸರ್ಕಾರವು ಮಹತ್ವದ ಸಭೆ ನಡೆಸಿತು. ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದೇವೆ ಅಂತ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಈಗಾಗಲೇ ಅರಣ್ಯ ರಕ್ಷಣೆ ಮಾಡಲಾಗುತ್ತಿದೆ, ಈ ರೀತಿ ವರದಿ ಅವೈಜ್ಞಾನಿಕವಾಗಿದೆ. ಕಾಡು ಕೂಡ ನಮ್ಮಲ್ಲಿ ಜಾಸ್ತಿ ಆಗಿದೆ. ಇನ್ನು ಪುನಃ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ ಸಿಎಂ ನೇತೃತ್ವದಲ್ಲಿ ಕೇಂದ್ರದ ಸಚಿವರನ್ನು ಭೇಟಿಯಾಗಿ ಇದನ್ನು ರದ್ದು ಮಾಡುವಂತೆ ಈಗಾಗಲೇ ಮನವಿ ಮಾಡಿದ್ದೇವೆ. ಮತ್ತೆ ಪಶ್ಚಿಮ ಘಟ್ಟದ ಶಾಸಕರ ನೇತೃತ್ವದ ನಿಯೋಗ ದೆಹಲಿಗೆ ತೆರಳಲು ನಿರ್ಧಾರ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಇಂತಹ ಅವೈಜ್ಞಾನಿಕ ವರದಿ ಒಪ್ಪಿಕೊಳ್ಳಲು ಸಾಧ್ಯ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ಮಾಹಿತಿಗಳ ಪ್ರಕಾರ ಕಾನೂನು ತಯಾರು ಮಾಡುವವರೇ ಹೋರಾಟಕ್ಕೆ ಹೊರಟಿರುವುದು ಹಾಸ್ಯಾಸ್ಪದ ಎನ್ನಲಾಗಿದೆ. ಅದಲ್ಲದೆ ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುವ ಜಿಲ್ಲೆಗಳ ಶಾಸಕರು ಈ ವರದಿಯನ್ನು ಒಪ್ಪಿ ಸಹಿ ಮಾಡಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಈಗಾಗಲೇ ಪರಿಸರ ಇಲಾಖೆ ಐದನೇ ಅಧಿಸೂಚನೆ ಹೊರಡಿಸಿದ್ದು, ಇದಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಸಲು 60 ದಿನಗಳ ಅವಕಾಶ ನೀಡಲಾಗಿದೆ. ವರದಿ ಜಾರಿಯಾಗುವುದರಲ್ಲಿ ಅನುಮಾನವಿಲ್ಲ. ಆದರೆ ವರದಿಯ ಕೆಲ ನ್ಯೂನತೆಗಳನ್ನು ಬಾಗಿಸಲು ಅವಕಾಶ ಇದೆ ಎನ್ನುತ್ತಾರೆ ಕಾನೂನು ತಜ್ಞರು. ಈ ಕುರಿತಂತೆ ಸರ್ಕಾರ ಮತ್ತು ಕಾನೂನು ಇಲಾಖೆ ಏನು ಕ್ರಮ ಕೈಗೊಳ್ಳುತ್ತೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿರಿ…

Leave a Comment

Your email address will not be published. Required fields are marked *